×
Ad

ಕರ್ನಾಟಕ ಹೈಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕ

Update: 2018-02-06 21:15 IST

ಬೆಂಗಳೂರು, ಫೆ.6: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ, ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿಯವರನ್ನು ನೇಮಕಗೊಳಿಸಲಾಗಿದೆ. ಫೆಬ್ರವರಿ 20 ಅಥವಾ ಅದಕ್ಕೂ ಮುನ್ನ ಅಧಿಕಾರ ಸ್ವೀಕರಿಸುವಂತೆ ಕೇಂದ್ರ ಕಾನೂನು ಇಲಾಖೆ ಆದೇಶ ಹೊರಡಿಸಿದೆ.

2017ರ ಅಕ್ಟೋಬರ್ 10 ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ನಿವೃತ್ತಿ ಹೊಂದಿದ್ದು, ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಂಗಾಮಿ ಸಿಜೆ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಮೂರು ತಿಂಗಳಿನಿಂದ ಖಾಲಿ ಇದ್ದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಕಡೆಗೂ ಹೊಸ ಸಿಜೆಯನ್ನು ನೇಮಿಸಲಾಗಿದೆ.

ನ್ಯಾ. ದಿನೇಶ್ ಮಹೇಶ್ವರಿ 1980ರಲ್ಲಿ ಕಾನೂನು ಪದವಿ ಪಡೆದಿದ್ದು, 1981ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 2004 ಸೆಪ್ಟೆಂಬರ್ 2 ರಂದು ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ನಂತರ 2014 ರಲ್ಲಿ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸಿದ್ದರು. 2016ರ ಫೆಬ್ರವರಿ 24 ರಂದು ನ್ಯಾಯಮೂರ್ತಿ ಸ್ಥಾನದಿಂದ ಮುಖ್ಯ ನ್ಯಾಯಮೂರ್ತಿ ಸ್ಥಾನ್ಕಕೆ ಭಡ್ತಿ ಪಡೆದು ಮೇಘಾಲಯ ಹೈಕೋರ್ಟ್ ಸಿಜೆ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿ ವರ್ಗಾವಣೆಗೊಂಡಿದ್ದು, ಫೆಬ್ರವರಿ 20ರೊಳಗೆ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇಂದ್ರ ಕಾನೂನು ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News