ಅಪಾಯದಲ್ಲಿ ದೇಶದ ಆರೋಗ್ಯ

Update: 2018-02-07 04:14 GMT

ಮುಂಬೈಯ ಸಂಸ್ಥೆಯೊಂದು ಪ್ರಕಟಿಸಿದ ಸಮೀಕ್ಷೆಯಲ್ಲಿ ಭಾರತವು ಅಗತ್ಯ ಔಷಧಿಗಳ ಕೊರತೆಯನ್ನು ಎದುರಿಸುತ್ತಿದೆ ಎನ್ನುವುದನ್ನು ಬಹಿರಂಗಪಡಿಸಿದೆ. ಭಾರತದ 2015ರ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯು 376 ಔಷಧಿಗಳನ್ನು ಒಳಗೊಂಡಿದೆ. ಇವು ಆರೋಗ್ಯ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ ಲಭ್ಯವಿರಬೇಕಾಗಿತ್ತು. ಆದರೆ ಸಮೀಕ್ಷೆಯೊಂದರಲ್ಲಿ ಶೇ.50ಕ್ಕಿಂತಲೂ ಅಧಿಕ ಅಂಗಡಿಗಳಲ್ಲಿ ಹಣಕೊಟ್ಟರೂ ಆ ಔಷಧಿಗಳು ಲಭ್ಯವಿಲ್ಲ. ಇದರ ಬೆನ್ನಿಗೇ ಇತ್ತೀಚಿನ ದಿನಗಳಲ್ಲಿ ಆರೋಗ್ಯ ವಲಯಕ್ಕೆ ಬೇಕಾದ ಹಣ ಹೂಡಿಕೆಗಳಲ್ಲಿ ಕೊರತೆಯಾಗುತ್ತಿವೆ. ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಎಂದು ಕರೆಸಿಕೊಂಡಿದ್ದ ಆರೋಗ್ಯ ವಿಮೆಯ ವಾಸ್ತವವೂ ಬಯಲಾಗಿದೆ. ಸರಕಾರ ಇದಕ್ಕಾಗಿ ವಿನಿಯೋಗಿಸಿದ ಹಣದಲ್ಲಿ ಈ ದೇಶದ ಪ್ರಜೆಯೊಬ್ಬ ಒಂದು ಸೆಟ್ ಕ್ರೋಸಿನ್ ಮಾತ್ರೆಯನ್ನಷ್ಟೇ ತನ್ನದಾಗಿಸಬಲ್ಲ ಎನ್ನುವುದು ವಿಶ್ಲೇಷಕರಿಂದ ಬಯಲಾಗಿದೆ.

ಭಾರತದ ಆರೋಗ್ಯವೇ ಅಪಾಯದಲ್ಲಿರುವಾಗ, ಈ ದೇಶ ವಿಶ್ವದ ದಿಗ್ಗಜನಾಗುವ ಕನಸು ಕಾಣುವುದರಲ್ಲಿ ಯಾವ ಅರ್ಥವಿದೆ. ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಅಧ್ಯಯನ ಬಹಿರಂಗಪಡಿಸಿದೆ. ಅನೇಕ ಸಂಶೋಧನೆಗಳು ಭಾರತದಲ್ಲಿ ತೀವ್ರ ಸ್ವರೂಪದ ಮಧುಮೇಹ(ಡಯಾಬಿಟಿಸ್) ಮತ್ತು ರಕ್ತದೊತ್ತಡ ಇರುವುದನ್ನು ಸಾಬೀತುಪಡಿಸಿವೆ. ಈ ಕಾಯಿಲೆಗಳ ಬಗ್ಗೆ 17 ರಾಜ್ಯಗಳಲ್ಲಿ ನಡೆಸಿದ 1.3 ಮಿಲಿಯ ಭಾರತೀಯರ ಅಧ್ಯಯನವು/ಸಮೀಕ್ಷೆಯು ಆಘಾತಕಾರಿ ದತ್ತಾಂಶಗಳನ್ನು ಹೊರಗೆಡಹಿದೆ.

  ಒಟ್ಟು ಭಾರತೀಯರಲ್ಲಿ ಶೇ. 7.5 ಮಂದಿ ಮಧುಮೇಹಿಗಳು (ಡಯಾಬಿಟಿಸ್) ಮತ್ತು ಶೇ.25 ಮಂದಿ ಹೈ ಬ್ಲಡ್ ಪ್ರೆಶರ್ (ಬಿಪಿ) ಇರುವವರು. ಡಯಾಬಿಟಸ್ ಮತ್ತು ರಕ್ತದೊತ್ತಡದೊಂದಿಗೆ ಬದುಕುವ ವ್ಯಕ್ತಿಗಳಲ್ಲಿ ವಿವಿಧ ಪ್ರದೇಶ ಹಾಗೂ ರಾಜ್ಯಗಳಲ್ಲಿ ವ್ಯತ್ಯಾಸಗಳಿರುವುದನ್ನು ಅಧ್ಯಯನವು ಗುರುತಿಸಿದೆ. ನಗರ ಹಾಗೂ ಗ್ರಾಮೀಣ ಎರಡೂ ಪ್ರದೇಶಗಳಲ್ಲಿ ಕೇರಳ ಮತ್ತು ತಮಿಳುನಾಡಿನಲ್ಲಿ ಈ ಎರಡೂ ಕಾಯಿಲೆಗಳು ತೀರಾ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ. ಹೈಬಿಪಿಯಲ್ಲಿ ಹರ್ಯಾಣ ಮತ್ತು ಪಂಜಾಬಿನೊಂದಿಗೆ ಕೇರಳ ಕೂಡ ಮುಂಚೂಣಿಯಲ್ಲಿದೆ.

 ಅಧ್ಯಯನವು ಈ ಎರಡು ಕಾಯಿಲೆಗಳಿಗೆ ಸಂಬಂಧಿಸಿದಂತೆ ಹಲವು ಮಿಥ್ಯೆಗಳನ್ನು ಬಯಲು ಮಾಡಿದೆ. ಮೊದಲನೆಯದಾಗಿ, ಡಯಾಬಿಟಿಸ್ ಮತ್ತು ಹೈ ಬಿಪಿ ನಗರಪ್ರದೇಶಗಳಿಗೆ ಸೀಮಿತವಾಗಿಲ್ಲ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಪ್ರಮಾಣ ಕಡಿಮೆ ಇದ್ದರೂ, ಇವು ಸಮಾಜದ ಪಾಲಿಗೆ ಒಂದು ದೊಡ್ಡ ಹೊರೆಯಾಗಿವೆ. ಎರಡನೆಯದಾಗಿ, ಇವು ಶ್ರೀಮಂತರ ಕಾಯಿಲೆಗಳಲ್ಲ. ಶ್ರೀಮಂತರಿಗೆ ಈ ಕಾಯಿಲೆಗಳು ಬರುವ ಸಾಧ್ಯತೆ ಬಡವರಿಗಿಂತ ಸ್ವಲ್ಪ ಹೆಚ್ಚು ಅಷ್ಟೆ. ಮೂರನೆಯದಾಗಿ, ಎಳೆ ಹರೆಯದವರನ್ನೂ ಇವುಗಳು ಬಿಟ್ಟಿಲ್ಲ. 18-25ರ ವಯೋಮಾನದ ಹತ್ತು ಮಂದಿಯಲ್ಲಿ ಕನಿಷ್ಠ ಒಬ್ಬರಿಗಾದರೂ ಹೈ ಬಿಪಿ ಇದೆ. ಇದಕ್ಕೂ ಅವರು ಅವರು ವಾಸಿಸುವ ಪ್ರದೇಶಗಳು, ಅವರ ಆರ್ಥಿಕ ಸ್ಥಿತಿ ಅಥವಾ ಅವರ ಲಿಂಗ(ಜಂಡರ್) ಕ್ಕೂ ಯಾವುದೇ ಸಂಬಂಧವಿಲ್ಲ. ಭಾರತದಲ್ಲಿ ಯಾಕೆ ಹೀಗಾಗುತ್ತಿದೆ? ಒಂದು ರಾಷ್ಟ್ರವಾಗಿ ನಮ್ಮ ಆಹಾರಾಭ್ಯಾಸಗಳು ಮತ್ತು ಜೀವನ ಶೈಲಿ ಬದಲಾಗುತ್ತಿದೆ. ನಾವು ಹೆಚ್ಚು ಹೆಚ್ಚು ಪ್ರೊಸೆಸ್ ಮಾಡಲಾದ ಹಾಗೂ ಸಂಸ್ಕರಿತ ಆಹಾರ ಸೇವಿಸುತ್ತಿದ್ದೇವೆ.

ವಿಶ್ವದಲ್ಲಿ ಹೆಚ್ಚಿನ ಜನರು ತಿನ್ನುವುದಕ್ಕಿಂತ ಕಡಿಮೆ ಹಣ್ಣುಗಳನ್ನು ಹಾಗೂ ತರಕಾರಿಗಳನ್ನು ತಿನ್ನುತ್ತಿರುವ ನಮ್ಮ ಹೆಚ್ಚಿನ ಶಕ್ತಿದಾಯಕವು ಕಾರ್ಬೊಹೈಡ್ರೇಟ್‌ಗಳ ರೂಪದಲ್ಲಿದೆ. ನಮ್ಮ ಹಿಂದಿನ ತಲೆಮಾರಿಗೆ ಹೋಲಿಸಿದಲ್ಲಿ ನಾವು ನಿಧಾನವಾಗಿ, ಆದರೆ ಒಂದೇ ಗತಿಯಲ್ಲಿ, ಹೆಚ್ಚು ಹೆಚ್ಚು ಚಲನೆರಹಿತ ಜೀವನಶೈಲಿಯ ಕಡೆಗೆ ನಡೆಯುತ್ತಿದ್ದೇವೆ. ಇಷ್ಟೇ ಅಲ್ಲ, ನಮ್ಮ ನೇತ್ಯಾತ್ಮಕ ಪರಿಣಾಮ ನಮ್ಮ ಮುಂದಿನ ತಲೆಮಾರಿಗೂ ವಿಸ್ತರಿಸುತ್ತಿದೆ. ಇತ್ತೀಚಿನ ಅಧ್ಯಯನವೊಂದು, ಚೀನಾದೊಂದಿಗೆ ಭಾರತದಲ್ಲಿ ಕೂಡ ಅತ್ಯಂತ ಹೆಚ್ಚಿನ ಸಂಖ್ಯೆಯ ಡಯಾಬಿಟಿಸ್ ಮಕ್ಕಳಿರುವುದನ್ನು ಪತ್ತೆ ಹಚ್ಚಿದೆ. ನಾವು ವ್ಯಾಯಾಮ ಮತ್ತು ನಿಗದಿತ ದೈಹಿಕ ಚಟುವಟಿಕೆಗಳಿಗೆ ವಿದಾಯ ಹೇಳಿ ಅನಾರೋಗ್ಯಕರ ಆಹಾರಕ್ಕೆ ಮುಗಿ ಬೀಳುತ್ತಿದ್ದೇವೆ.

 ಈ ಸಮಸ್ಯೆಗಳಲ್ಲಿ ಹೆಚ್ಚಿನವುಗಳನ್ನು ಒಂದು ವೈಯಕ್ತಿಕ ಮಟ್ಟದಲ್ಲಿ ಬಗೆಹರಿಸಬೇಕಾಗಿದೆಯಾದರೂ, ಸಮಾಜ ತನ್ನ ಬೇಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ನಮ್ಮ ಶ್ರಮ ಸಂಸ್ಕೃತಿ ಬದಲಾಗಲೇಬೇಕು. ಶ್ರಮ ಮತ್ತು ಬದುಕಿನ ನಡುವಣ ಒಂದು ಆರೋಗ್ಯಕರ ಸಮತೋಲನವನ್ನು ನಾವು ಕಾಯ್ದುಕೊಳ್ಳಬೇಕು. ಅಂದರೆ, ಆರೋಗ್ಯಕರವಾದ ಆಹಾರ ಸೇವನೆ ಮತ್ತು ಆರೋಗ್ಯಪೂರ್ಣ ಜೀವನ ನಮ್ಮ ಸಾಮಾಜಿಕ ಬದುಕಿನ ಒಂದು ಅಂಗವಾಗಬೇಕು. ಇದಕ್ಕಿಂತ ಮುಖ್ಯವಾಗಿ, ಕನಿಷ್ಠಪಕ್ಷ ನಮ್ಮ ರಾಷ್ಟ್ರದ ಅಭಿವೃದ್ಧಿಗಾಗಿಯಾದರೂ, ಈ ನಿಟ್ಟಿನಲ್ಲಿ ಸರಕಾರ ಮಧ್ಯೆ ಪ್ರವೇಶಿಸಲೇಬೇಕು. ಸಾರ್ವಜನಿಕ ಆರೋಗ್ಯ ಸೇವೆಗಳ ಮೂಲಕ ಜನರಿಗೆ ಇನ್ಸುಲಿನ್ ಮತ್ತು ಆ್ಯಂಟಿಹೈಪರ್‌ಟೆನ್ಸಿವ್ ಔಷಧಿಗಳು ಸಿಗುವಂತೆ ಅದು ನೋಡಿಕೊಳ್ಳಲೇಬೇಕು. ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಾಗಿ ನಗರಗಳಲ್ಲಿ ಹಾಗೂ ನಗರಗಳ ಹೊರವಲಯಗಳಲ್ಲಿ ಸ್ವಚ್ಛ ಹಾಗೂ ಸುರಕ್ಷಿತವಾದ ಪ್ರದೇಶಗಳನ್ನು ನಿರ್ಮಿಸಿ ಅವುಗಳ ಉಸ್ತುವಾರಿ ನೋಡಿಕೊಳ್ಳಲು ಬೇಕಾದ ಸಂಪನ್ಮೂಲಗಳನ್ನು ಸರಕಾರ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗ ತಡೆ ಚಿಕಿತ್ಸಾಲಯಗಳನ್ನು ಸ್ಥಾಪಿಸಬೇಕು.

ಈ ಕಾಯಿಲೆಗಳನ್ನು ಕೂಡಲೇ ಬಗೆಹರಿಸದಿದ್ದಲ್ಲಿ, ಮುಂದೆ ಬರಲಿರುವ ಜನರ ಜೀವನ ಸನ್ನಿವೇಶಗಳ ಪರಿಣಾಮವಾಗಿ ನಮ್ಮ ರಾಷ್ಟ್ರದ ಸಂಪತ್ತಿನ ಮೇಲೆ ಗಂಭೀರಪರಿಣಾಮಗಳಾಗಬಹುದು. ಇದರಿಂದಾಗಿ ಹೆಚ್ಚಾಗುವ ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಉತ್ಪಾದನೆಯ ನಷ್ಟ ನಮ್ಮ ಆರ್ಥಿಕ ಬೆಳವಣಿಗೆಯನ್ನು ಕುಂಠಿತಗೊಳಿಸಬಹುದು. ಸಾರ್ವಜನಿಕ ಆರೋಗ್ಯ ಸೌಕರ್ಯಗಳಲ್ಲಿ ನಾವು ಹೂಡಿಕೆ ಮಾಡದಿದ್ದಲ್ಲಿ ಅದು ನಮಗೇ ಮಾರಕವಾಗುತ್ತದೆ. ಔಷಧಿಗಿಂತ ರೋಗ ಬರದಂತೆ ತಡೆಯುವುದೇ ಮೇಲು ಎಂಬುವುದನ್ನು ನಾವು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News