ಉತ್ತರ ಪ್ರದೇಶ: ಎಲ್ಲಾ ರೋಗಿಗಳಿಗೂ ಒಂದೇ ಸಿರಿಂಜ್ ಬಳಕೆ; 46 ಮಂದಿಗೆ ಎಚ್‍ಐವಿ

Update: 2018-02-07 10:11 GMT

ಉನ್ನಾವ್, ಫೆ.7: ನಕಲಿ ವೈದ್ಯನೊಬ್ಬ ಅಗ್ಗದ ಚಿಕಿತ್ಸೆ ನೀಡುವ ನೆಪದಲ್ಲಿ ಎಚ್‍ಐವಿ ರೋಗಿಯೊಬ್ಬನಿಗೆ ಚುಚ್ಚುಮದ್ದು ನೀಡಲು ಉಪಯೋಗಿಸಿದ ಸಿರಿಂಜ್ ನಿಂದ ಹಲವು ಮಂದಿ ಇತರ ರೋಗಿಗಳಿಗೂ ಚುಚ್ಚುಮದ್ದು ನೀಡಿದ ಪರಿಣಾಮ ಉತ್ತರ ಪ್ರದೇಶದ  ಉನ್ನಾವ್ ಜಿಲ್ಲೆಯ ಬಂಗರ್ಮವು ತೆಹ್ಸಿಲ್ ಎಂಬಲ್ಲಿ  ಕಳೆದ ಹತ್ತು ತಿಂಗಳುಗಳ ಅವಧಿಯಲ್ಲಿ ಕನಿಷ್ಠ 46 ಮಂದಿ ಎಚ್‍ಐವಿ ಬಾಧಿತರಾಗಿದ್ದಾರೆಂದು ತಿಳಿದು ಬಂದಿದೆ.

ಈ ಘಟನೆಯ ಬಗ್ಗೆ ತನಿಖೆ ನಡೆಸಲು ಕೇಂದ್ರ ಸರಕಾರ ಉನ್ನಾವ್ ಗೆ ತಂಡವೊಂದನ್ನು ಕಳುಹಿಸಿದೆ. ಈ ರೀತಿ ಬೇಜವಾಬ್ದಾರಿಯಿಂದ ಸಿರಿಂಜ್ ಉಪಯೋಗಿಸಿದ ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಉನ್ನಾವ್ ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಡಾ ಎಸ್ ಪಿ ಚೌಧುರಿ ಹೇಳಿದ್ದಾರೆ.

ಎಪ್ರಿಲ್ ನಿಂದ ಜುಲೈ 12ರ ತನಕ ನಡೆಸಲಾದ ಸಾಮಾನ್ಯ ತಪಾಸಣೆಯಲ್ಲಿ 12 ಎಚ್‍ಐವಿ ಪ್ರಕರಣಗಳು ಬಂಗರ್ಮವು ತೆಹ್ಸಿಲ್ ಒಂದರಲ್ಲಿಯೇ ಪತ್ತೆಯಾಗಿದ್ದರೆ, ನವೆಂಬರ್ ತಿಂಗಳಲ್ಲಿ ನಡೆಸಲಾದ ಇನ್ನೊಂದು ತಪಾಸಣೆಯಲ್ಲಿ 13 ಪ್ರಕರಣಗಳು ಪತ್ತೆಯಾಗಿದ್ದವು. ಈ ಬೆಳವಣಿಗೆಯ ನಂತರ ಆರೋಗ್ಯ ಇಲಾಖೆಯು ದ್ವಿಸದಸ್ಯ ಸಮಿತಿಯೊಂದನ್ನು ರಚಿಸಿ ಈ ತೆಹ್ಸಿಲ್ ನಲ್ಲಿ  ತಪಾಸಣೆಗಾಗಿ ನಿಯೋಜಿಸಿತ್ತು.. ಜನವರಿ 24, 25 ಹಾಗೂ 27ರಂದು 566 ಮಂದಿಯನ್ನು ತಪಾಸಣೆಗೆ ಗುರಿ ಪಡಿಸಲಾಗಿದ್ದರೆ, ಅವರಲ್ಲಿ 21 ಮಂದಿಗೆ ಎಚ್‍ಐವಿ ಇರುವುದು  ಪತ್ತೆಯಾಗಿದೆ. ಈ ರೀತಿ ಈ ತೆಹ್ಸಿಲ್ ನಲ್ಲಿ ಒಟ್ಟು ಪತ್ತೆಯಾದ ಎಚ್‍ಐವಿ ರೋಗಿಗಳ ಸಂಖ್ಯೆ 46 ಆಗಿದೆ.

ಆರೋಪಿ ನಕಲಿ ವೈದ್ಯನನ್ನು ರಾಜೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ. ಆತ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದು ಆತನನ್ನು ಶೀಘ್ರ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News