ಹಳದಿ-ಕೆಂಪು ಧ್ವಜವನ್ನೇ ಮುಂದುವರೆಸಲು ವಾಟಾಳ್ ಆಗ್ರಹ

Update: 2018-02-07 12:46 GMT

ಬೆಂಗಳೂರು, ಫೆ.7: ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ಹಾಗೂ 55 ವರ್ಷಗಳ ಇತಿಹಾಸವುಳ್ಳ ಹಳದಿ ಮತ್ತು ಕೆಂಪು ಬಣ್ಣದ ಧ್ವಜವನ್ನೇ ನಾಡಧ್ವಜವನ್ನಾಗಿ ಘೋಷಿಸಬೇಕು. ಬೇರೆ ಯಾವ ಧ್ವಜಕ್ಕೂ ಮಾನ್ಯತೆ ನೀಡಬಾರದು ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ನಾಡಧ್ವಜಕ್ಕೆ ಸಾಂವಿಧಾನಿಕ ಮಾನ್ಯತೆ ಪಡೆಯುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ನೇತೃತ್ವದದಲ್ಲಿ ರಚನೆ ಮಾಡಿದ ಸಮಿತಿ, ನಾಡಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿ ಮುಖ್ಯಮಂತ್ರಿಗೆ ವರದಿ ಸಲ್ಲಿಸಿರುವುದು ತೀವ್ರ ಖಂಡನೀಯ. ಕನ್ನಡಪರ ಹೋರಾಟಗಾರರು, ಸಾಹಿತಿಗಳು, ಲೇಖಕರು, ಕನ್ನಡ ಚಳವಳಿಗಾರರ ಅಭಿಪ್ರಾಯ ಪಡೆಯದೇ ಧ್ವಜವನ್ನು ಅಂತಿಮಗೊಳಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 50 ವರ್ಷಗಳಿಂದ ಕನ್ನಡಿಗರು ಹಳದಿ ಹಾಗೂ ಕೆಂಪು ಬಣ್ಣದ ಧ್ವಜವನ್ನೇ ಒಪ್ಪಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಸರಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಈ ಅರಿಶಿಣ ಕುಂಕುಮದ ಬಣ್ಣವಿರುವ ಬಾವುಟವನ್ನೇ ಬಳಸಲಾಗುತ್ತಿದೆ. ಹೊರರಾಜ್ಯಗಳಲ್ಲಿರುವ ಕನ್ನಡ ಭವನ, ದೆಹಲಿಯಲ್ಲಿರುವ ಕನ್ನಡ ಭವನ ಹಾಗೂ ವಿದೇಶದಲ್ಲಿರುವ ಕನ್ನಡ ಕಾರ್ಯಕ್ರಮಗಳಲ್ಲಿಯೂ ಇದೇ ಧ್ವಜ ಬಳಸುತ್ತಿದ್ದಾರೆ. ಆದರೆ, ಇದೀಗ ಅದನ್ನು ಬದಲಿಸಲು ಮುಂದಾಗಿದ್ದು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದರು.

ಧ್ವಜದ ಮೇಲ್ಭಾಗದಲ್ಲಿ ಹಳದಿ, ಮಧ್ಯಬಾಗದಲ್ಲಿ ಬಿಳಿ ಮತ್ತು ಕೆಳಬಾಗದಲ್ಲಿ ಕೆಂಪು ಬಣ್ಣಗಳಿಂದ ಕೂಡಿದ್ದು, ಮಧ್ಯದಲ್ಲಿ ರಾಷ್ಟ್ರದ ಲಾಂಚನ ಕೂಡಿಸಲಾಗಿದೆ. ದಶಕಗಳಿಂದ ಕನ್ನಡಿಗರ ಭಾವನೆಗಳಲ್ಲಿ ಮಿಳಿತವಾಗಿರುವ ನಾಡ ಧ್ವಜ ಬದಲಿಸುವ ಮೂಲಕ ಕನ್ನಡಿಗರ ಭಾವನೆಗೆ ಧಕ್ಕೆ ತಂದಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಕನ್ನಡ ಧ್ವಜ ಬದಲಾಗಬಾರದು. ಒಂದು ವೇಳೆ ಸರಕಾರ ಧ್ವಜವನ್ನು ಬದಲಿಸಿ, ಬೇರೆ ವಿನ್ಯಾಸವನ್ನು ಅನುಮೋದಿಸಿದರೆ ನಾವು ರಾಜ್ಯಾದ್ಯಂತ ಎಲ್ಲ ಕಾರ್ಯಕ್ರಮಗಳಲ್ಲಿ ಈಗಿರುವ ನಾಡಧ್ವಜವನ್ನೇ ಬಳಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News