ರ‍್ಯಾಗಿಂಗ್ ಗೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ: ಆರೋಪ

Update: 2018-02-07 12:55 GMT

ಬೆಂಗಳೂರು, ಫೆ.7: ಸಹಪಾಠಿಗಳ ಕಿರುಕುಳದಿಂದ ಮನನೊಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ದ್ವಾರಕನಗರದ ನಿವಾಸಿ ಮೇಘನಾ(18) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ನಗರದ ದಯಾನಂದ ಸಾಗರ ಕಾಲೇಜಿನಲ್ಲಿ ಪ್ರಥಮ ಬಿಇ ವ್ಯಾಸಂಗ ಮಾಡುತ್ತಿದ್ದ ಮೇಘನಾ, ಇತ್ತೀಚಿಗೆ ರೆಪ್ರೆಸೆಂಟೇಟಿವ್ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಳು. ಚುನಾವಣೆಗೆ ಸ್ಪರ್ಧಿಸಿದ್ದರಿಂದ ಕೆಲ ಸಹಪಾಠಿಗಳು ಈಕೆಯೊಂದಿಗೆ ಜಗಳವಾಡಿದ್ದರು. ಸಹಪಾಠಿಗಳ ವರ್ತನೆಯಿಂದ ನೊಂದಿದ್ದ ಮೇಘನಾ ಕೆಲ ದಿನಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲೇ ಇದ್ದಳು. ಪೋಷಕರು ಮೇಘನಾಳಿಗೆ ಸಮಾಧಾನಪಡಿಸಿ ಪುನಃ ಕಾಲೇಜಿಗೆ ಹೋಗುವಂತೆ ಮನವೊಲಿಸಿದ್ದರು ಎಂದು ತಿಳಿದುಬಂದಿದೆ.

ಪೋಷಕರ ಒತ್ತಾಯದ ಮೇರೆಗೆ ಮೇಘನಾ ಕಾಲೇಜಿಗೆ ಹೋದಾಗ ಸಹಪಾಠಿಗಳು ನಿಂದಿಸಿ, ತನ್ನ ವಾಟ್ಸಾಪ್ ಸಂಖ್ಯೆಗೆ ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರಿಂದ ಬೇಸರಗೊಂಡು ಮಂಗಳವಾರ ಮಧ್ಯಾಹ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.

ದೂರು: ಮಗಳ ಸಾವಿಗೆ ಆಕೆಯ ಸಹಪಾಠಿಗಳೇ ಕಾರಣ. ನನ್ನ ಮಗಳಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಸಹಪಾಠಿಗಳಾದ ಸಂದೀಪ್, ನಿಖಿಲ್ ಮತ್ತಿತರರು ಮನೆ ಬಳಿ ಬಂದು ಮಗಳೊಂದಿಗೆ ಜಗಳವಾಡಿ ಮಾನಸಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿ ಮೇಘನಾ ತಾಯಿ ಲತಾ ಚಂದ್ರಶೇಖರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News