×
Ad

ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ನೆಲಸಮ: ಶಿಕ್ಷಣ ಸಚಿವ ತನ್ವೀರ್ ಸೇಠ್

Update: 2018-02-07 18:46 IST

ಬೆಂಗಳೂರು, ಫೆ. 7: ಶಿಥಿಲಾವಸ್ಥೆಯಲ್ಲಿರುವ ಸರಕಾರಿ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಲು ಆದೇಶಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಜೀವರಾಜ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ನೆಲಸಮಗೊಳಿಸಿ, ಹೊಸ ಕೊಠಡಿಗಳನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಶೈಕ್ಷಣಿಕ ಉನ್ನತಿಗೆ ಕೇಂದ್ರ-ರಾಜ್ಯ ಸರಕಾರ ಅಗತ್ಯ ನೆರವು ನೀಡಬೇಕು. ಆದರೆ, ಕೇಂದ್ರ ಕೇವಲ 440ಕೋಟಿ ರೂ.ಗಳಷ್ಟೇ ನೀಡಿದ್ದು, ಇದರಿಂದ ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನದ ಕೊರತೆಯಾಗಿದೆ. ಆದರೂ, ಸರಕಾರ ಶಾಲಾ ಕಟ್ಟಡಗಳ ದುರಸ್ತಿಗೆ ಈಗಾಗಲೇ 566 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಬಳಕೆಯಾಗದೆ ಉಳಿದಿದ್ದ 243 ಕೋಟಿ ರೂ.ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಶಾಲಾ ಕಟ್ಟಡಗಳ ದುರಸ್ತಿ ಹಾಗೂ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲಾಗುವುದೆಂದ ಅವರು, ಕೇಂದ್ರ ಸರಕಾರದ ಶಿಕ್ಷಣಕ್ಕೆ ಅನುದಾನ ಕಡಿತ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಶಾಲೆಗಳ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದೇವೆ ಎಂದರು.

ಬಡ ಮಕ್ಕಳ ಜೀವಕ್ಕೆ ರಕ್ಷಣೆ ಕಲ್ಪಿಸಿ: ಶೃಂಗೇರಿ ಕ್ಷೇತ್ರದ ಎನ್.ಆರ್.ಪುರ ತಾಲೂಕಿನ 95ಸರಕಾರಿ ಶಾಲೆಗಳ ಪೈಕಿ 4 ಶಾಲೆಗಳ ಮೇಲ್ಛಾವಣಿ ಬೀಳುವ ಹಂತದಲ್ಲಿವೆ. ಹೀಗಾಗಿ ಶಾಲಾ ಮಕ್ಕಳ ಜೀವಕ್ಕೆ ರಕ್ಷಣೆ ಕಲ್ಪಿಸಬೇಕು. ಶಾಲಾ ಕಟ್ಟಡ ದುರಸ್ತಿಗೆ 1.50ಲಕ್ಷ ರೂ., 2ಲಕ್ಷ ರೂ.ಅನುದಾನ ಬಿಡುಗಡೆ ಮಾಡಿದರೆ ಅದರಲ್ಲಿ ಶಾಲಾ ಕಟ್ಟಡ ದುರಸ್ತಿ ಕಷ್ಟ ಎಂದು ಆರಂಭದಲ್ಲಿ ಸದಸ್ಯ ಜೀವರಾಜ್ ಹೇಳಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News