×
Ad

ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲಾಗಿದೆ: ರಾಮಲಿಂಗಾರೆಡ್ಡಿ

Update: 2018-02-07 19:58 IST

ಬೆಂಗಳೂರು, ಫೆ.7: ರಾಜ್ಯದಲ್ಲಿ ನಡೆದಿರುವ ಹಿಂದು ಹಾಗೂ ಮುಸ್ಲಿಂ ಯುವಕರ ಹತ್ಯೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಚಾರ್ಜ್‌ಶೀಟ್ ಹಾಕಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬುಧವಾರ ವಿಧಾನ ಪರಿಷತ್‌ನಲ್ಲಿ ನಿಯಮ 68ರ ಅಡಿಯಲ್ಲಿ ಕೇಳಿದ ಪಶ್ನೆಗೆ ಉತ್ತರಿಸಿದ ರಾಮಲಿಂಗಾರೆಡ್ಡಿ ಅವರು, ಬಿಜೆಪಿ, ಆರೆಸ್ಸೆಸ್, ಕಾಂಗ್ರೆಸ್, ಪಿಎಫ್‌ಐ ಸೇರಿ ಇನ್ನಿತರ ಯಾವುದೆ ಪಕ್ಷ ಹಾಗೂ ಸಂಘಟನೆಯ ಕಾರ್ಯಕರ್ತರನ್ನು ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೈದರೂ ಪೊಲೀಸ್ ಇಲಾಖೆಯು ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಹಿಂದು, ಮುಸ್ಲಿಂ ಯುವಕರ ಹತ್ಯೆಗಳಿಗೆ ಸಂಬಂಧಪಟ್ಟಂತೆ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಹಾಕಲಾಗಿದೆ ಎಂದು ಹೇಳಿದರು.

ರಾಜ್ಯದ ಬಿಜೆಪಿ ಮುಖಂಡರು 23 ಬಿಜೆಪಿ ಕಾರ್ಯಕರ್ತರ ಕೊಲೆಯಾಗಿದೆ ಎಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ, ಅಶೋಕ್ ಪೂಜಾರಿ ಬದುಕಿದ್ದು, ಪತ್ರದಲ್ಲಿ ಅಶೋಕ್ ಪೂಜಾರಿ ಬದುಕಿಲ್ಲ ಎಂದು ಬರೆದಿದ್ದಾರೆ. ಅದೇ ರೀತಿಯಾಗಿ ಕಾರ್ತಿಕ್‌ರಾಜ್‌ರನ್ನು ಅವರ ಸಹೋದರಿಯೆ ಕೊಲೆ ಮಾಡಿಸಿರುವುದು, ಯೋಗೀಶ್‌ಗೌಡರನ್ನು ಜಮೀನು ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಹೀಗಾಗಿ, ಪಿಎಫ್‌ಐ, ಕಾಂಗ್ರೆಸ್ ಪಕ್ಷದವರೆ ಹಿಂದು ಯುವಕರನ್ನು ಕೊಲೆ ಮಾಡಿಸಿದ್ದಾರೆ ಎನ್ನುವುದಕ್ಕೆ ಯಾವುದೆ ಸಾಕ್ಷಾಧಾರಗಳು ಇಲ್ಲ ಎಂದು ಹೇಳಿದರು.

ರುದ್ರೇಶ್, ಸಂತೋಷ್ ಇನ್ನಿತರ ಹಿಂದುಗಳ ಕೊಲೆಯಾದಾಗ ಬಿಜೆಪಿ ಮುಖಂಡರು ತೀವ್ರವಾಗಿ ಪ್ರತಿಭಟಿಸಿ ಆರೋಪಿಗಳನ್ನು ಬಂಧಿಸಿ ಎಂದು ಒತ್ತಾಯಿಸಿದಂತೆ, ದಾನಮ್ಮ ಹಾಗೂ ಬಶೀರ್ ಮೃತಪಟ್ಟಾಗ ಬಿಜೆಪಿಯವರು ಅವರ ಕುಟುಂಬಗಳಿಗೆ ಭೇಟಿ ನೀಡಿ ಏಕೆ ಸಾಂತ್ವಾನ ಹೇಳಲಿಲ್ಲ, ಪ್ರತಿಭಟಿಸಲಿಲ್ಲ ಎಂದು ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ರಾಜ್ಯದಲ್ಲಿ 2013ರಿಂದ 2017ರವರೆಗೆ 7759 ಕೊಲೆಯಾಗಿದ್ದರೆ, ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ 8855 ಕೊಲೆಗಳಾಗಿವೆ. ಬಿಜೆಪಿ ಸರಕಾರದ ಅವಧಿಯಲ್ಲಿ 9668 ಸುಲಿಗೆ ಪ್ರಕರಣಗಳು ನಡೆದರೆ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ 5562 ಸುಲಿಗೆ ಪ್ರಕರಣಗಳು ನಡೆದಿವೆ ಎಂದು ವಿವರಣೆ ನೀಡಿದರು.

ಅತ್ಯಾಚಾರಿಗಳಿಗೆ ಗಲ್ಲು
ಎಂ.ಎಂ.ಕಲಬುರಗಿ ಅವರ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದರೆ, ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಪೂರ್ಣಗೊಳ್ಳುವ ಹಂತದಲ್ಲಿದೆ. ಅಲ್ಲದೆ, ರಾಜ್ಯದಲ್ಲಿ ಅತ್ಯಾಚಾರವನ್ನು ತಡೆಗಟ್ಟಲು ಮಧ್ಯಪ್ರದೇಶದಲ್ಲಿ ಜಾರಿಯಾದಂತಹ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯ ಕಾನೂನನ್ನು ರಾಜ್ಯದಲ್ಲಿಯೂ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News