ನಾಲ್ಕುವರೆ ವರ್ಷದಲ್ಲಿ ಆಹಾರ ಇಲಾಖೆಗೆ 19 ಮಂದಿ ಆಯುಕ್ತರ ಬದಲಾವಣೆ: ಶೆಟ್ಟರ್ ಆರೋಪ

Update: 2018-02-08 12:43 GMT

ಬೆಂಗಳೂರು, ಫೆ. 8: ‘ಆಹಾರ ಇಲಾಖೆಯಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ 19 ಮಂದಿ ಆಯುಕ್ತರ ಬದಲಾವಣೆ ಮಾಡಲಾಗಿದೆ. ಇದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದ ಆಡಳಿತ ವೈಖರಿ’ ಎಂದು ವಿಪಕ್ಷ ಜಗದೀಶ್ ಶೆಟ್ಟರ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಮೇಲೆ ಮಾತನಾಡಿದ ಅವರು, ರಾಜ್ಯ ಸರಕಾರಕ್ಕೆ ನಾಲ್ಕುವರೆ ವರ್ಷ ಕಳೆದರೂ, ಈ ಸರಕಾರ ಇನ್ನೂ ಟೇಕಾಫ್ ಆಗಿಲ್ಲ. ಆದರೆ, ಕೇವಲ ಜಾಹೀರಾತಿಗಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು.

ರಾಜ್ಯಪಾಲರ ಭಾಷಣ ಕೇವಲ ಸಂಪ್ರದಾಯಕ್ಕೆ ಸೀಮಿತ. ಸರಕಾರದ ದೂರದೃಷ್ಟಿಯೇ ಅದರಲ್ಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ, ಸರಕಾರ ತನ್ನ ರಾಜ್ಯಪಾಲರ ಮೂಲಕ ಬೆನ್ನು ತಟ್ಟಿಸಿಕೊಂಡಿದೆ ಎಂದು ಶೆಟ್ಟರ್ ಆರೋಪಿಸಿದರು.

ಜಸ್ಟ್ ಪಾಸ್: ಬಜೆಟ್ ಘೋಷಿತ ಅನುದಾನದ ಪೈಕಿ 82 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿಲ್ಲ. ಇಷ್ಟೊಂದು ಬೃಹತ್ ಮೊತ್ತವನ್ನು ಇನ್ನು ಎರಡು ತಿಂಗಳಲ್ಲಿ ಖರ್ಚು ಮಾಡಲು ಸಾಧ್ಯವೇ ಎಂದು ಶೆಟ್ಟರ್, ಸರಕಾರವನ್ನು ಪ್ರಶ್ನಿಸಿದರು.

ಕೃಷಿ ಇಲಾಖೆ-ಶೇ.42.88, ನೀರಾವರಿ-ಶೇ.35, ನಗರಾಭಿವೃದ್ಧಿ ಇಲಾಖೆ- ಶೇ.37.55, ಲೋಕೋಪಯೋಗಿ-ಶೇ.28.74, ಕೌಶಲ್ಯಾಭಿವೃದ್ಧಿ-ಶೇ.36, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ-ಶೇ.23.19ರಷ್ಟು ಮಾತ್ರ ಸಾಧನೆ ಮಾಡಿದೆ. ಕೆಲ ಇಲಾಖೆಗಳು ಜಸ್ಟ್ ಪಾಸ್ ಆಗಿದ್ದು, ಉಳಿದ ಇಲಾಖೆಗಳು ಅನುದಾನವನ್ನು ಖರ್ಚು ಮಾಡಿಲ್ಲ ಎಂದು ಅಂಕಿ-ಅಂಶಗಳನ್ನು ನೀಡಿದರು.

ಸಿಡಿ ಪ್ರದರ್ಶನ: ಗಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ಪಿಐಎಲ್ ಹಿಂಪಡೆಯಲು ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಲಂಚದ ಆಮಿಷವೊಡ್ಡಿದ್ದು, ಆ ಸಂಬಂಧದ ಸಿಡಿ ನನ್ನ ಬಳಿಯಲ್ಲಿದೆ. ನಿನ್ನೆ ನನ್ನ ಬಳಿಯೂ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಆಪ್ತ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಎಂಬ ವ್ಯಕ್ತಿ ಬಂದಿದ್ದ. ಇದಕ್ಕಿಂತ ಭ್ರಷ್ಟಾಚಾರ ಇನ್ನೇನು ಬೇಕು. ಪ್ರಧಾನಿ ಮೋದಿ ಹೇಳಿಕೆ ನೀಡಿದಂತೆ ಈ ಸರಕಾರ ಕಮಿಷನ್ ದಂಧೆ ನಡೆಸುತ್ತಿದೆ ಎಂಬುದಕ್ಕೆ ಇದು ಉದಾಹರಣೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News