ಗಲಭೆ ಸೃಷ್ಟಿಸಿದ ಬಿಜೆಪಿಯವರೇ ಕಾನೂನು ಸುವವ್ಯಸ್ಥೆ ಬಗ್ಗೆ ಮಾತನಾಡುತ್ತಾರೆ: ರಿಜ್ವಾನ್ ಅರ್ಶದ್

Update: 2018-02-08 15:27 GMT

ಬೆಂಗಳೂರು, ಫೆ.8: ಜನರ ನಡುವೆ ಕೋಮು ದ್ವೇಷ ಬಿತ್ತಿ, ಗಲಭೆ ಸೃಷ್ಟಿಸುವವರು ಬಿಜೆಪಿ ನಾಯಕರೆ ಆಗಿದ್ದಾರೆ. ಪುನಃ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬೊಬ್ಬಿಡುವವರು ಅವರೇ ಆಗಿದ್ದಾರೆ ಎಂದು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಶದ್ ಆರೋಪಿಸಿದರು.

ಗುರುವಾರ ವಿಧಾನಪರಿಷತ್‌ನಲ್ಲಿ ರಾಜ್ಯಪಾಲರ ಭಾಷಣದ ಕುರಿತು ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡುತ್ತಾ, ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರ ಮೇಲೆ ಅನಗತ್ಯವಾಗಿ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ರಿಜ್ವಾನ್ ಅರ್ಶದ್, ಬಿಜೆಪಿಯೇ ಕೋಮು ಗಲಭೆಗಳನ್ನು ಸೃಷ್ಟಿಸಿ, ಸಾವು ನೋವುಗಳಿಗೆ ಕಾರಣವಾಗುತ್ತಿದೆ. ಆದರೆ,  ರಾಜ್ಯದಲ್ಲಿ ಕೋಮು ಗಲಭೆ ಹದಗೆಟ್ಟಿದೆ ಎಂದು ಸದನದಲ್ಲಿ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣೆ ಕುರಿತು ಮಾತನಾಡುವಾಗ ರಿಜ್ವಾನ್ ಅರ್ಶದ್ ಅನಗತ್ಯವಾಗಿ ಮಧ್ಯೆ ಪ್ರವೇಶಿಸುತ್ತಿದ್ದಾರೆ. ಇದರಿಂದ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲವೆಂದು ಕೋಟಾ ಶ್ರೀನಿವಾಸ ಪೂಜಾರಿ, ಸದನದ ಬಾವಿಗಿಳಿದು ಧರಣಿ ಮಾಡಿದರು.

ಈ ವೇಳೆ ಸಭಾಪತಿ ಸ್ಥಾನದಲ್ಲಿದ್ದ ರಾಮಚಂದ್ರಗೌಡ, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣೆ ಕುರಿತು ಮಾತನಾಡುವಾಗ ಸದನಕ್ಕೆ ಚ್ಯುತಿ ಬರದಂತೆ ಏನು ಬೇಕಾದರು ಮಾತನಾಡಬಹುದು, ವಿರೋಧ ಪಕ್ಷ ಸದಸ್ಯರ ಆರೋಪಗಳಿಗೆ ಸಚಿವರು ಇಲ್ಲವೆ ಮುಖ್ಯಮಂತ್ರಿಗಳು ಕೊನೆಯಲ್ಲಿ ಉತ್ತರ ನೀಡಲಿ ಎಂದು ಹೇಳಿ, ಧರಣಿ ಹಿಂಪಡೆದು ಮಾತನಾಡುವಂತೆ ಶ್ರೀನಿವಾಸ ಪೂಜಾರಿಗೆ ಮನವಿ ಮಾಡಿದರು. ನಂತರ ಶ್ರೀನಿವಾಸ ಪೂಜಾರಿ ತಮ್ಮ ಸ್ಥಾನಕ್ಕೆ ತೆರಳಿ, ಕಾಂಗ್ರೆಸ್‌ನ ಆಡಳಿತ ವೈಖರಿಯನ್ನು ಟೀಕಿಸಿ ತನ್ನ ಮಾತನ್ನು ಮುಗಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News