2ನೆ ಬಾರಿಗೆ ಸಂಪೂರ್ಣ ಸ್ಥಗಿತಗೊಂಡ ಅಮೆರಿಕ ಸರಕಾರ

Update: 2018-02-09 16:32 GMT

ವಾಶಿಂಗ್ಟನ್, ಫೆ. 9: ಸರಕಾರದ ನಿರ್ವಹಣೆಗೆ ಸರಿಯಾದ ಸಮಯದಲ್ಲಿ ಬಜೆಟ್ ಅನುದಾನ ಲಭಿಸದ ಹಿನ್ನೆಲೆಯಲ್ಲಿ ಅಮೆರಿಕ ಸರಕಾರ 3 ವಾರಗಳಲ್ಲಿ 2ನೆ ಬಾರಿಗೆ ಗುರುವಾರ ಮಧ್ಯರಾತ್ರಿಯಿಂದ ಸ್ಥಗಿತಗೊಂಡಿತು.

ಆದಾಗ್ಯೂ, ಶುಕ್ರವಾರ ಬೆಳಗ್ಗೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಸದಸ್ಯರು ಜೊತೆಯಾಗಿ ಸರಕಾರಕ್ಕೆ ಅನುದಾನ ಒದಗಿಸುವ ಮಸೂದೆಯನ್ನು ಅಂಗೀಕರಿಸುವ ಮೂಲಕ ಟ್ರಂಪ್ ಸರಕಾರದ ವಿಶ್ವಾಸಾರ್ಹತೆಗೆ ಹೆಚ್ಚಿನ ಹಾನಿಯಾಗುವುದನ್ನು ತಪ್ಪಿಸಿದರು.

ಈ ಮೂಲಕದ ಸರಕಾರದ ಕಾರ್ಯನಿರ್ವಹಣೆ ಎದುರಾಗಲಿದ್ದ ಕಂಟಕವೊಂದು ದೂರವಾಗಿದೆ.

‘ಸ್ಟಾಪ್‌ಗ್ಯಾಪ್ ನಿಧಿ ಮತ್ತು ಬಜೆಟ್’ 240-186 ಮತಗಳ ಅಂತರದಿಂದ ಅಂಗೀಕಾರಗೊಂಡಿತು. ಇದಕ್ಕೆ ಇನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಬೇಕಾಗಿದೆ. ಅವರು ಸಹಿ ಹಾಕಿದ ಬಳಿಕ ಅದು ಕಾನೂನಾಗುತ್ತದೆ.

ಅಧ್ಯಕ್ಷರು ಮಸೂದೆಗೆ ಸಹಿ ಹಾಕುತ್ತಾರೆ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ. ಈ ಕಾನೂನು ಮಾರ್ಚ್ 23ರವರೆಗೆ ಸರಕಾರದ ನಿರ್ವಹಣೆಗೆ ನಿಧಿ ಪೂರೈಸುತ್ತದೆ.

ಬಜೆಟ್‌ನ ಡೆಫಿಸಿಟ್ ಸ್ಪೆಂಡಿಂಗ್ ಬಗ್ಗೆ ರಿಪಬ್ಲಿಕನ್ ಸೆನೆಟರ್ ರ್ಯಾಂಡ್ ಪೌಲ್ ವ್ಯಕ್ತಪಡಿಸಿದ ಆಕ್ಷೇಪಕ್ಕೆ ಆಡಳಿತಾರೂಢ ಪಕ್ಷದ 67 ಸದಸ್ಯರು ಬೆಂಬಲ ನೀಡಿದರು. ಹಾಗಾಗಿ ಮಸೂದೆ ಅಂಗೀಕಾರದಲ್ಲಿ ಸಮಸ್ಯೆ ತಲೆದೋರಿತು.

  ಇಡೀ ರಾತ್ರಿ ಚರ್ಚೆ ನಡೆದ ಬಳಿಕ, ಆಡಳಿತಾರೂಢ ಪಕ್ಷದ ಸಂಸದರ ವಿರೋಧವನ್ನು ಸರಿದೂಗಿಸುವುದಕ್ಕಾಗಿ ಪ್ರತಿಪಕ್ಷ ಡೆಮಾಕ್ರಟಿಕ್ ಸದಸ್ಯರು ಮತದಾನದಲ್ಲಿ ತಮ್ಮ ಹೆಚ್ಚುವರಿ ಮತಗಳನ್ನು ನೀಡಿ ಮಸೂದೆ ಅಂಗೀಕಾರಗೊಳ್ಳುವಂತೆ ನೋಡಿಕೊಂಡರು.

ರಿಪಬ್ಲಿಕನ್ ಸೆನೆಟರ್ ಆಡಿದ ಆಟ!

ಜಾಗರೂಕತೆಯಿಂದ ರೂಪಿಸಲಾದ ‘ಸ್ಟಾಪ್‌ಗ್ಯಾಪ್ ಫಂಡಿಂಗ್ ಮತ್ತು ಬಜೆಟ್’ ಮಸೂದೆಯನ್ನು ಸೆನೆಟ್ ನಾಯಕರು ಈ ವಾರದ ಆರಂಭದಲ್ಲಿ ಮಂಡಿಸಿದ್ದರು. ಅದು ಗುರುವಾರ ಮಧ್ಯರಾತ್ರಿಗೆ ಮೊದಲು ಸುಲಭವಾಗಿ ಅಂಗೀಕಾರಗೊಳ್ಳುತ್ತದೆ ಎನ್ನುವ ವಿಶ್ವಾಸ ಅವರಿಗಿತ್ತು.

ಆದರೆ, ಅನಿರೀಕ್ಷಿತ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಡುವಿಗೆ ಮೊದಲು ಮಸೂದೆ ಅಂಗೀಕಾರಗೊಳ್ಳಲಿಲ್ಲ. ಈ ಮಸೂದೆ ಬಗ್ಗೆ 9 ಗಂಟೆಗಳ ಕಾಲ ನಡೆದ ಚರ್ಚೆಯ ವೇಳೆ, ಮಸೂದೆಯಲ್ಲಿರುವ ಕೊರತೆ ವೆಚ್ಚ (ಡೆಫಿಸಿಟ್ ಸ್ಪೆಂಡಿಂಗ್)ಕ್ಕೆ ಕೆಂಟಕಿಯ ರಿಪಬ್ಲಿಕನ್ ಪಕ್ಷದ ಸೆನೆಟರ್ ರ್ಯಾಂಡ್ ಪೌಲ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಆಡಳಿತಾರೂಢ (ರಿಪಬ್ಲಿಕನ್) ಪಕ್ಷದ ಇತರರೂ ದನಿಗೂಡಿಸಿದರು.

ಪೌಲ್ ಭಿನ್ನಮತದ ಹಿನ್ನೆಲೆಯಲ್ಲಿ ಮಸೂದೆ ಕುರಿತ ಚರ್ಚೆಯು ಗಡುವನ್ನೂ ಮೀರಿ ಶುಕ್ರವಾರ ಮುಂಜಾನೆವರೆಗೂ ಮುಂದುವರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News