×
Ad

ಯುವಕರಿಗಾಗಿ ‘ನಮ್ಮ ಕರ್ನಾಟಕ’ ವೇದಿಕೆ ರಚನೆ: ದಿನೇಶ್‌ಗುಂಡೂರಾವ್

Update: 2018-02-09 20:09 IST

ಬೆಂಗಳೂರು, ಫೆ.9: ಭವಿಷ್ಯದ ಕರ್ನಾಟಕ ಯಾವ ರೀತಿಯಲ್ಲಿರಬೇಕು ಎಂಬ ಕಲ್ಪನೆಯೊಂದಿಗೆ ಯುವ ಸಮುದಾಯದೊಂದಿಗೆ ಸಂವಾದ, ಅಭಿಪ್ರಾಯ ಸಂಗ್ರಹಿಸಲು ‘ನಮ್ಮ ಕರ್ನಾಟಕ’ ವೇದಿಕೆಯನ್ನು ರಚನೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ತಿಳಿಸಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಯುವ ಸಚಿವರು, ಶಾಸಕರೊಂದಿಗೆ ‘ನಮ್ಮ ಕರ್ನಾಟಕ’ ವೇದಿಕೆಗೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ರಾಜ್ಯದ 100 ವಿಧಾನಸಭಾ ಕ್ಷೇತ್ರಗಳಲ್ಲಿ ಯುವಜನರೊಂದಿಗೆ ಸಭೆ, ಸಮಾಲೋಚನೆ, ಸಂವಾದಗಳನ್ನು ನಡೆಸಿ ಭವಿಷ್ಯದ ಕರ್ನಾಟಕದ ಬಗ್ಗೆ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ರಾಜ್ಯದಲ್ಲಿ ಲಕ್ಷಾಂತರ ಯುವಕರು ಗೊತ್ತುಗುರಿಯಿಲ್ಲದಂತೆ ಜೀವನ ಸಾಗಿಸುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಸಾಗಿಸಲು ಯುವಕರ ಸಹಕಾರ ಅತ್ಯಮೂಲ್ಯ. ಅವರ ನಿರೀಕ್ಷೆಗಳು, ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಈ ವೇದಿಕೆ ಅವಕಾಶ ಕಲ್ಪಿಸಲಿದೆ ಎಂದು  ತಿಳಿಸಿದರು.

ಯುವಜನರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಫೆಬ್ರವರಿ ಹಾಗೂ ಮಾರ್ಚ್ ತಿಂಗಳಲ್ಲಿ ಈ ಸಂವಾದ ಸಭೆಗಳು ನಡೆಯಲಿವೆ. ಇದಕ್ಕಾಗಿ ಯುವ ಕಾಂಗ್ರೆಸ್‌ನ ಕಟ್ಟಾಳುಗಳನ್ನು ಬಳಸಿಕೊಳ್ಳಲಾಗುವುದು. ಜತೆಗೆ, ಸಮಾಜದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡದೆ, ಸೌಹಾರ್ದತೆಯನ್ನು ಬೆಳೆಸಲು ಪ್ರಯತ್ನಿಸುತ್ತೇವೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ ಎಂತಹ ಸರಕಾರ ಬೇಕು, ಯುವಕರ ಆಶಯಗಳೇನು, ಯಾವ ಯಾವ ಕ್ಷೇತ್ರಗಳಲ್ಲಿ ಎಂತಹ ಪ್ರಗತಿಯನ್ನು ಯುವಕರು ನಿರೀಕ್ಷಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ಸಂವಾದ ಸಭೆಗಳಲ್ಲಿ ವ್ಯಕ್ತವಾಗಲಿವೆ. ಒಟ್ಟಾರೆಯಾಗಿ ರಾಜ್ಯದ ಯುವಕರ ಅಭಿಪ್ರಾಯಗಳನ್ನು ಕ್ರೋಡೀಕರಿಸುವ ಪ್ರಯತ್ನ ಇದಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಕೃಷ್ಣಭೈರೇಗೌಡ, ಪ್ರಿಯಾಂಕ್ ಖರ್ಗೆ, ವಿನಯ್‌ಕುಲಕರ್ಣಿ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಪ್ರಿಯಾಕೃಷ್ಣ, ವಿಧಾನಪರಿಷತ್ ಸದಸ್ಯರಾದ ರಿಝ್ವಿನ್ ಅರ್ಶದ್, ಶ್ರೀನಿವಾಸ್‌ಮಾನೆ, ಭೈರತಿ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News