ಬೆಂಗಳೂರು: ಕಾನೂನು ಸುವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಎಬಿವಿಪಿಯಿಂದ ಧರಣಿ
ಬೆಂಗಳೂರು, ಫೆ.9: ರಾಜ್ಯದಲ್ಲಿ 23ಕ್ಕೂ ಹೆಚ್ಚು ಹತ್ಯೆಗಳಾಗಿದ್ದರೂ ಸಹ ಇವುಗಳನ್ನು ಭೇದಿಸುವಲ್ಲಿ ಸರಕಾರ ವಿಫಲವಾಗಿದ್ದು, ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಪ್ರತಿಭಟನೆ ನಡೆಸಿತು.
ಶುಕ್ರವಾರ ನಗರದ ಮೌರ್ಯ ವೃತ್ತದಲ್ಲಿ ಜಮಾಯಿಸಿದ ಎಬಿವಿಪಿ ಕಾರ್ಯಕರ್ತರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರಕಾರ ರಾಜ್ಯದಲ್ಲಿ ನಡೆದಿರುವ ಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚಿ, ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪರಿಷತ್‌ನ ರಾಜ್ಯ ಕಾರ್ಯದರ್ಶಿ ಹರ್ಷ ಮಾತನಾಡಿ, ಮಡಿಕೇರಿಯ ಕುಟ್ಟಪ್ಪ, ಬೆಂಗಳೂರಿನ ಕದಿರೇಶ್, ಸಂತೋಷ್ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 23ಕ್ಕೂ ಹೆಚ್ಚು ಹತ್ಯೆಗಳು ನಡೆದಿವೆ. ಅಲ್ಲದೇ, ದಕ್ಷ ಪೊಲೀಸ್ ಅಧಿಕಾರಿಗಳಿಗೂ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.
ರೈತರ ಸಮಸ್ಯೆಗಳಿಗೆ ಸರಕಾರ ಸ್ಫಂದಿಸುತ್ತಿಲ್ಲ. ಹೀಗಾಗಿ, ರಾಜ್ಯದಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೋರಾಟಗಾರರನ್ನು ಹತ್ತಿಕ್ಕುವ ಉದ್ದೇಶದಿಂದ ಲಾಠಿಪ್ರಹಾರ ನಡೆಸುತ್ತಾರೆ. ಹೀಗಾಗಿ, ರಾಜ್ಯ ಸರಕರದ ಮೇಲೆ ಜನತೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇಬ್ಬರು ಸಾಹಿತಿಗಳ ಹತ್ಯೆಯಾಗಿದ್ದರು ಆರೋಪಿಗಳನ್ನು ಗುರುತಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಂತಹ ಪ್ರಕರಣಗಳು ರಾಜ್ಯದಲ್ಲಿ ಮತ್ತೆ ಮರುಕಳಿಸದಂತೆ ಕಾನೂನು ಸುವ್ಯವಸ್ಥೆ ಸುಧಾರಿಸಲು ಸರಕಾರ ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿ ಮುಖಂಡರಾದ ವೆಂಕಟೇಶ್ ರೆಡ್ಡಿ, ಸೂರಜ್, ಮಾರುತಿ, ಸೇರಿದಂತೆ, ಕಾರ್ಯಕರ್ತರು ಪಾಲ್ಗೊಂಡಿದ್ದರು.