ವಿಶ್ವವಿದ್ಯಾಲಯಗಳು ಗ್ರಾಹಕರನ್ನು ಸೆಳೆಯುವಂತಹ ಕಾರ್ಖಾನೆಗಳಾಗಿವೆ: ಆನಂದ್ ತೇಲ್ತುಂಬ್ಡೆ
ಬೆಂಗಳೂರು, ಫೆ.9: ಜ್ಞಾನ, ಸಂಶೋಧನೆ ಹಾಗೂ ವಿಮರ್ಶಾನೋಟಗಳನ್ನು ಹುಟ್ಟುಹಾಕುವ ಕೇಂದ್ರವಾಗಬೇಕಿದ್ದ ದೇಶದ ವಿಶ್ವವಿದ್ಯಾಲಯಗಳು, ಉದ್ಯಮದ ಮಾರುಕಟ್ಟೆಗೆ ಗ್ರಾಹಕರನ್ನು ಸೆಳೆಯುವಂತಹ ಕಾರ್ಖಾನೆಗಳಾಗಿ ಬದಲಾಗುತ್ತಿವೆ ಎಂದು ರಾಜಕೀಯ ತಜ್ಞ ಆನಂದ್ ತೇಲ್ತುಂಬ್ಡೆ ವಿಷಾದಿಸಿದ್ದಾರೆ.
ಶುಕ್ರವಾರ ಸಂವಾದ ಸಂಸ್ಥೆ ತನ್ನ 25ನೆ ವರ್ಷಾಚರಣೆಯ ಪ್ರಯುಕ್ತ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಭಾರತದಲ್ಲಿ ಯುವತ್ವ ಮತ್ತು ಉನ್ನತ ಶಿಕ್ಷಣ -ಒಂದು ಮರುಚಿಂತನೆ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇವತ್ತಿನ ವಿಶ್ವವಿದ್ಯಾಲಯಗಳಲ್ಲಿ ಜ್ಞಾನಾಧಾರಿತ ಶಿಕ್ಷಣಕ್ಕೆ ಅವಕಾಶವಿಲ್ಲ. ಕೇವಲ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸುವಂತಹ ಮಾಲ್‌ಗಳಾಗಿ ಪರಿವರ್ತನೆಗೊಳ್ಳುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯಗಳಲ್ಲಿ ವಿಮರ್ಶೆ, ಆಲೋಚನೆ ಹಾಗೂ ಮುಕ್ತ ಸಂವಾದದಿಂದ ಹೊಸ ಚಿಂತನಾ ಮಾದರಿಗಳನ್ನು ಸೃಷ್ಟಿಸುವುದು ಮುಖ್ಯ ಧ್ಯೇಯವಾಗಬೇಕಿತ್ತು. ಆದರೆ, ಭಾರತದ ವಿಶ್ವವಿದ್ಯಾಲಯಗಳು ಬಂಡವಾಳಶಾಹಿಗಳ ಹಿಡಿತದಲ್ಲಿ ಸಿಲುಕಿ, ಮಾರುಕಟ್ಟೆ ಪೂರಕವಾದ ಉದ್ಯೋಗಿಗಳನ್ನಷ್ಟೆ ಉತ್ಪಾದಿಸುತ್ತಿದೆ ಎಂದು ಅವರು ಹೇಳಿದರು.
ಹಿಂದುತ್ವ ರಾಜಕಾರಣಕ್ಕೂ ಬಂಡವಾಳಶಾಹಿಗಳಿಗೂ ಹಾಗೂ ವಿಶ್ವವಿದ್ಯಾಲಯಗಳು ಕಾರ್ಖಾನೆಗಳಾಗಿ ರೂಪಗೊಂಡಿರುವುದಕ್ಕೂ ಒಂದಕ್ಕೊಂದು ಸಂಬಂಧವಿದೆ. ಇದರಿಂದ ಹೊರತಾಗಿ ವಿಶ್ವವಿದ್ಯಾಲಯಗಳನ್ನು ಸಂಶೋಧನೆ, ಜ್ಞಾನಾರ್ಜನೆಯ ಸಂಸ್ಥೆಗಳಾಗಿ ರೂಪಿಸಬೇಕಾದರೆ ಜನಪರವಾದಂತಹ, ದೇಶದ ಅಸ್ಮಿತೆಗೆ ಪೂರಕವಾದಂತಹ ರಾಜಕೀಯ ಚಿಂತನೆಗಳು ಮುನ್ನೆಲೆಗೆ ಬರಬೇಕಾಗಿದೆ ಎಂದು ಅವರು ಆಶಿಸಿದರು.
ಆರ್ಥಿಕ ತಜ್ಞ ಡಾ.ಮುಜಾಫರ್ ಅಸ್ಸಾದಿ ಮಾತನಾಡಿ, ಸ್ವಾತಂತ್ರ್ಯಾ ನಂತರ ಜೆಎನ್‌ಯು, ಉಸ್ಮಾನಿಯಾ ಸೇರಿದಂತೆ ದೇಶದ ಕೆಲವೊಂದು ವಿಶ್ವವಿದ್ಯಾಲಯಗಳಲ್ಲಿ ಸದಾ ಸಂವಾದ, ಚರ್ಚೆಗಳು ನಡೆಯುತ್ತಿದ್ದವು, ಅಭಿಪ್ರಾಯಗಳ ಮಂಥನವಾಗಿ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡಲಾಗುತ್ತಿತ್ತು. ಆದರೆ, ಇವತ್ತಿನ ಸಂದರ್ಭದಲ್ಲಿ ಅಂತಹ ಮುಕ್ತ ಸಂವಾದಕ್ಕೆ ಅವಕಾಶ ಇದೆಯೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸಮಾಜ ಶಾಸ್ತ್ರಜ್ಞ ಡಾ.ಸಿ.ಜಿ.ಲಕ್ಷ್ಮಿಪತಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ ಬಂದು ಎಂಟು ದಶಕಗಳು ಕಳೆದಿದ್ದರೂ ಶಿಕ್ಷಣ ಸಂಸ್ಥೆಗಳು ಬದಲಾಗಿಲ್ಲ. ಸಮಾಜದಲ್ಲಿರುವ ಎಲ್ಲ ಮೌಢ್ಯಗಳು, ಅನಾಚಾರಗಳು ಶಾಲಾ-ಕಾಲೇಜುಗಳ ತರಗತಿಗಳಲ್ಲಿ ತುಂಬಿ ತುಳುಕುತ್ತಿವೆ. ಇವುಗಳನ್ನು ಬದಲಾಯಿಸಬೇಕೆಂಬ ಕನಿಷ್ಠ ಪ್ರಜ್ಞೆಯು ಶಿಕ್ಷಣ ಸಂಸ್ಥೆಗಳ ಆಡಳಿತ ವರ್ಗಕ್ಕೆ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಶಿಕ್ಷಕರು ಸಮಾಜದ ಕುರಿತು ಪೂರ್ವಗ್ರಹ ಪೀಡಿತರಾಗಿರುತ್ತಾರೆ. ವಿದ್ಯಾರ್ಥಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು, ವಿವಿಧ ಜಾತಿ ಸಮುದಾಯಗಳಿಂದ ಬರುವ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಅರಿತುಕೊಳ್ಳುವ ಬಗೆ ಹೇಗೆ ಎಂಬುದರ ಬಗ್ಗೆ ಜ್ಞಾನವಿರುವುದಿಲ್ಲ. ಕೇವಲ ತಮಗೆ ಸಂಬಂಧಿಸಿದ ಪಠ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಹೇಳುವುದಷ್ಟಕ್ಕೇ ಸೀಮಿತಗೊಂಡಿದ್ದಾರೆ. ಅಂತಹ ಶಿಕ್ಷಕರಿಂದ ಸಮಾಜದ ಬದಲಾವಣೆಯ ಕುರಿತು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಂವಾದ ಸಂಸ್ಥೆಯ ಅನಿತಾ ರತ್ನಾಂ, ಇಶ್ರಾತ್ ನಿಸಾರ್, ಬದುಕು ಕಮ್ಯೂನಿಟಿ ಕಾಲೇಜಿನ ಪ್ರಾಂಶುಪಾಲ ಮುರಳಿ ಮೋಹನ್, ದೇವರಾಜ್ ಪಾಟೀಲ್, ಕಿರಣ್‌ಕುಮಾರಿ, ಬದುಕು ಕಾಲೇಜಿನ ಪ್ರಾಧ್ಯಾಪಕರಾದ ಮಂಜು ಬಶೀರ್, ಮಂದೀಪ್, ಮಂಜುಳಾ ತೆಲಗಡೆ, ರಮೇಶ್ ಮತ್ತಿತರರಿದ್ದರು.
ಈಗಿರುವ ಶಿಕ್ಷಣದ ವ್ಯವಸ್ಥೆ ಯಥಾಸ್ಥಿತಿವಾದಿಗಳ ಮತ್ತು ಸಾಮ್ರಾಜ್ಯಶಾಹಿಗಳ ಹಿತಾಸಕ್ತಿಗೆ ಅನುಗುಣವಾಗಿ ರೂಪಿಸಲ್ಪಟ್ಟಿದೆ. ಇಂತಹ ವ್ಯವಸ್ಥೆಯನ್ನು ಬದಲಾಯಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಜನಪರ, ವಿದ್ಯಾರ್ಥಿಪರವಾದ ಶಿಕ್ಷಣ ವ್ಯವಸ್ಥೆಯ ರೂಪಿಸುವ ನಿಟ್ಟಿನಲ್ಲಿ ನಿರಂತರವಾದ ಪ್ರಕ್ರಿಯೆಗೆ ಚಾಲನೆ ಕೊಡಬೇಕಾಗಿದೆ. ಇದಕ್ಕೆ ಯುವಜನತೆ, ವಿದ್ಯಾರ್ಥಿಗಳು, ಶಿಕ್ಷಕರು, ವಿವಿಧ ಕ್ಷೇತ್ರಗಳ ತಜ್ಞರು ಒಟ್ಟುಗೂಡಬೇಕಾಗಿದೆ.
-ದೇವರಾಜ್‌ಪಾಟೀಲ್ ಪ್ರಾಧ್ಯಾಪಕರು, ಬದುಕು ಕಾಲೇಜು