×
Ad

ಬೆಂಗಳೂರು: ಗ್ರಾಮ ಸಹಾಯಕರ ಅನಿರ್ದಿಷ್ಟಾವಧಿ ಧರಣಿ ಅಂತ್ಯ

Update: 2018-02-09 21:14 IST

ಬೆಂಗಳೂರು, ಫೆ.8: ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಿ ಸೇವಾನಿಯಮಾವಳಿ ರೂಪಿಸಬೇಕೆಂದು ಆಗ್ರಹಿಸಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸರಕಾರದ ಭರವಸೆಯೊಂದಿಗೆ 2ನೆ ದಿನಕ್ಕೆ ಅತ್ಯಂಗೊಂಡಿದೆ.

ಶುಕ್ರವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಗ್ರಾಮ ಸಹಾಯಕರು, 2007ರಲ್ಲಿ ಗ್ರಾಮ ಸಹಾಯಕರ 10,450 ಹುದ್ದೆಗಳನ್ನು ಖಾಯಂಗೊಳಿಸಲಾಗಿದೆ. ಆದರೆ, ಇದುವರೆಗೆ ಹುದ್ದೆಗೆ ತಕ್ಕಂತೆ ಮೂಲ ವೇತನ ಪರಿಷ್ಕರಣೆಯಾಗಿಲ್ಲ. ಈ ಸಂಬಂಧ ಹಲವು ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಮ್ಮನ್ನು ಡಿ ದರ್ಜೆಯ ನೌಕರರು ಎಂದು ಪರಿಗಣಿಸಿ, ಸೇವಾ ನಿಯಮಾವಳಿ ರೂಪಿಸುವವರೆಗೂ ನಮ್ಮ ಹೋರಾಟ ಮುಂದುವರೆಸುತ್ತೇವೆಂದು ಪಟ್ಟು ಹಿಡಿದಿದ್ದರು.

ಗುರುವಾರ ಸ್ಥಳಕ್ಕಾಗಮಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಪ್ರತಿಭಟನಾಕಾರರನ್ನು ಭೇಟಿ ಮಾಡಿ ಮನವಿ ಸ್ವೀಕರಿಸಿ, ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ, ವಿಧಾನ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದರು. ಆದರೂ ಗ್ರಾಮ ಸಹಾಯರು ಧರಣಿ ಮುಂದುವರೆಸಿದ್ದರು.

ಭರವಸೆ: ಶುಕ್ರವಾರ ಮಧ್ಯಾಹ್ನದ ನಂತರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಇ.ವಿ ರಮಣರೆಡ್ಡಿ, ಸ್ಥಳಕ್ಕಾಗಮಿಸಿ, ವಿಧಾನ ಸಭೆಯಲ್ಲಿ ನೋಟ್ ಮಾಡಿರುವ ದಾಖಲೆ ತಂದು ತೋರಿಸಿ ಮನವೊಲಿಸಿದ ಬಳಿಕ ಪ್ರತಿಭಟನಾಕಾರರು ಧರಣಿಯನ್ನು ಹಿಂತೆಗೆದುಕೊಂಡರು.

ಭೇಟಿ: ವಿಧಾನ ಸಭೆ ಪ್ರತಿ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಶಾಸಕರಾದ ಕೆ.ಎನ್.ರಾಜಣ್ಣ, ಸೇರಿದಂತೆ ಹಲವಾರು ಸಂಘಟನೆಯ ಮುಖಂಡರು ಪ್ರತಿಭಟನಾನಿರತ ಗ್ರಾಮ ಸಹಾಯಕರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಇದೇ ಸಂದರ್ಭದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮ ಸಹಾಯಕರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ಕಂದಾಯ ಇಲಾಖಾ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ, ಮುದ್ದುಕೃಷ್ಣ, ಉಪಾಧ್ಯಕ್ಷ ದೇವರಾಜು, ಮಹಾ ಪೋಷಕ ಕಾಕೋಳು ಲಕ್ಕಪ್ಪ, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ವೆಂಕಟಾಲ ಮುನಿಯಪ್ಪ ಹಾಜರಿದ್ದರು.

ಫೆ.16ರಂದು ವಿಧಾನ ಸಭೆಯಲ್ಲಿ ಚರ್ಚಿಸಿ ಹುದ್ದೆಯನ್ನು ‘ಡಿ’ ದರ್ಜೆಗೇರಿಸಿ, ಸೇವಾ ಭದ್ರತೆ ಒದಗಿಸದಿದ್ದಲ್ಲಿ, ಫೆ17ರಿಂದ ಆಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಗ್ರಾಮ ಸಹಾಯಕರು ಸರಕಾರಕ್ಕೆ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News