ಏಕತೆ ಪ್ರದರ್ಶಿಸಿದ ದಕ್ಷಿಣ, ಉತ್ತರ ಕೊರಿಯಾ ಅಥ್ಲೀಟ್ ಗಳು

Update: 2018-02-09 18:34 GMT

ಪಿಯೊಂಗ್‌ಚೊಂಗ್(ದ.ಕೊರಿಯಾ), ಫೆ.9: ಇಲ್ಲಿ ಶುಕ್ರವಾರ 2018ರ ಚಳಿಗಾಲದ ಒಲಿಂಪಿಕ್ಸ್ ನ ಉದ್ಘಾಟನಾ ಸಮಾರಂಭದಲ್ಲಿ ಆತಿಥೇಯ ದಕ್ಷಿಣ ಕೊರಿಯಾ ತಂಡ ನೆರೆಯ ಉತ್ತರ ಕೊರಿಯಾದೊಂದಿಗೆ ಏಕತೆ ಪ್ರದರ್ಶಿಸಿದೆ. ಉಭಯ ದೇಶಗಳಲ್ಲಿ ಕಳೆದ ಕೆಲವು ತಿಂಗಳಿಂದ ಸಂಘರ್ಷ ನಡೆಯುತ್ತಿದ್ದರೂ ಅಥ್ಲೀಟ್‌ಗಳು ಒಂದೇ ಧ್ವಜದಡಿ ಪಥ ಸಂಚಲನ ನಡೆಸುವ ಮೂಲಕ ಗಮನ ಸೆಳೆದರು. ಉತ್ತರ ಕೊರಿಯಾದ ಐಸ್ ಹಾಕಿ ಆಟಗಾರ ಚುಂಗ್ ಹ್ವಾಂಗ್ ಹಾಗೂ ದಕ್ಷಿಣ ಕೊರಿಯಾದ ಬಾಬ್‌ಸ್ಲೆಡೆರ್ ವಾನ್ ಯುನ್-ಜಾಂಗ್ ಜಂಟಿ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಿದರು.

‘‘ನಮ್ಮನ್ನು ವಿಭಜಿಸಲು ಬಯಸುವ ಎಲ್ಲ ಶಕ್ತಿಗಳಿ ಗಿಂತ ನಾವು ಬಲಿಷ್ಠರಾಗಿದ್ದೇವೆ’’ ಎಂದು ಒಲಿಂಪಿಕ್ಸ್ ಅಧ್ಯಕ್ಷ ಥಾಮಸ್ ಬಾಕ್ ಹೇಳಿದ್ದಾರೆ.

ಲಿಝಿ ಯಾರ್ನಾಲ್ಡ್ ಬ್ರಿಟನ್‌ನ ಧ್ವಜಧಾರಿಯಾಗಿದ್ದರೆ, ರಶ್ಯದ ಅಥ್ಲೀಟ್‌ಗಳು ತಟಸ್ಥ ಒಲಿಂಪಿಕ್ಸ್ ಧ್ವಜ ಹಿಡಿದು ಪರೇಡ್‌ನಲ್ಲಿ ಭಾಗಿಯಾದರು.

   ಬ್ರಿಟನ್ ತಂಡ 59 ಅಥ್ಲೀಟ್‌ಗಳನ್ನು ಒಲಿಂಪಿಕ್ಸ್ ಗೆ ಕಳುಹಿಸಿಕೊಟ್ಟಿದೆ. ಯಾರ್ನಾಲ್ಡ್ ಸ್ಕೆಲ್ಟನ್ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಡೋಪಿಂಗ್ ಪರೀಕ್ಷೆಯಲ್ಲಿ ಪಾಸಾಗಿರುವ ರಶ್ಯದ 169 ಅಥ್ಲೀಟ್‌ಗಳನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಒಲಿಂಪಿಕ್ಸ್‌ಗೆ ಆಹ್ವಾನ ನೀಡಿತ್ತು. ಈ ತಂಡ ‘ರಶ್ಯದ ಒಲಿಂಪಿಕ್ಸ್ ಅಥ್ಲೀಟ್’ ಹೆಸರಿನಲ್ಲಿ ಸ್ಪರ್ಧಿಸಲಿದೆ. 18 ದಿನಗಳ ಕಾಲ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ 2,925 ಅಥ್ಲೀಟ್‌ಗಳು 93 ಧ್ವಜದಡಿ 15 ಕ್ರೀಡೆಗಳಲ್ಲಿ 102 ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ. ಆರು ರಾಷ್ಟ್ರಗಳಾದ ಈಕ್ವೆಡಾರ್, ಎರಿಟ್ರಿಯ, ಕೊಸೊವೊ, ಮಲೇಷ್ಯಾ, ನೈಜೀರಿಯ ಹಾಗೂ ಸಿಂಗಾಪುರ ಇದೇ ಮೊದಲ ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುತ್ತಿವೆ. 18 ದಿನಗಳ ಕಾಲ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪರ ಶಿವ ಕೇಶವನ್ ಹಾಗೂ ಜಗದೀಶ್ ಸಿಂಗ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿದ್ದಾರೆ. ಶಿವ ಫೆ.10 ಹಾಗೂ 11 ರಂದು ಹಾಗೂ ಜಗದೀಶ್ ಫೆ.16 ರಂದು ಸ್ಪರ್ಧೆಗಿಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News