ಟೆಸ್ಟ್ ಗಾಗಿ ಐಪಿಎಲ್ ನಿಂದ ದೂರ ಉಳಿದ ರಿಚರ್ಡ್ಸನ್!

Update: 2018-02-09 18:37 GMT

ಮೆಲ್ಬೋರ್ನ್, ಫೆ.9: ಆಸ್ಟ್ರೇಲಿಯದ ವೇಗದ ಬೌಲರ್ ಕೇನ್ ರಿಚರ್ಡ್‌ಸನ್ ಎರಡು ಕಾರಣ ನೀಡಿ ಈ ವರ್ಷ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ. ಎಪ್ರಿಲ್‌ನಲ್ಲಿ ನಡೆಯಲಿರುವ ತನ್ನ ವಿವಾಹ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಕನಸು ಈಡೇರಿಸಿಕೊಳ್ಳಲು ರಿಚರ್ಡ್‌ಸನ್ ಈ ನಿರ್ಧಾರ ಕೈಗೊಂಡಿದ್ದಾರೆ. ರಿಚರ್ಡ್‌ಸನ್ ಮೂರು ಐಪಿಎಲ್ ಋತುವಿನಲ್ಲಿ ಮೂರು ತಂಡಗಳನ್ನು ಪ್ರತಿನಿಧಿಸಿದ್ದರು. 2013ರಲ್ಲಿ ಪುಣೆ ವಾರಿಯರ್ಸ್‌ ತಂಡದ ಪಾಲಾಗಿದ್ದ ಅವರು ಕೇವಲ 3 ಪಂದ್ಯ ಆಡಿದ್ದರು. 2014ರಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗಿದ್ದ ಅವರು 7 ಪಂದ್ಯಗಳಲ್ಲಿ 9 ವಿಕೆಟ್‌ಗಳನ್ನು ಉರುಳಿಸಿದ್ದರು. 2015ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಿದ್ದರು. ಆರ್‌ಸಿಬಿ ಪರ 4 ಪಂದ್ಯಗಳಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದರು.

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿರುವ ರಿಚರ್ಡ್‌ಸನ್ ಆಸ್ಟ್ರೇಲಿಯದ ಪರ 15 ಏಕದಿನ(21 ವಿಕೆಟ್‌ಗಳು) ಹಾಗೂ 5 ಟ್ವೆಂಟಿ-20(2) ಪಂದ್ಯಗಳನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಭಾರೀ ಹಣ ಸಂಪಾದಿಸುವ ಅವಕಾಶವಿದ್ದರೂ ವೈಯಕ್ತಿಕ ಹಾಗೂ ವೃತ್ತಿಪರ ಕಾರಣಕ್ಕಾಗಿ ಐಪಿಎಲ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News