ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

Update: 2018-02-09 18:43 GMT

ಮಾನ್ಯರೇ,

ರಾಜ್ಯದ ಜನತೆಯ ಹಸಿವು ನಿವಾರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ‘ಅನ್ನಭಾಗ್ಯ ಯೋಜನೆ’ಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಈ ಯೋಜನೆಯಡಿಯಲ್ಲಿ 10 ಕೋಟಿ ಕುಟುಂಬಗಳು ಪ್ರತಿ ತಿಂಗಳು ಪಡಿತರವನ್ನು ಪಡೆಯುತ್ತಿವೆ. ಈ ನಿಟ್ಟಿನಲ್ಲಿ ಸುಧಾರಣೆಗಾಗಿ ಸರಕಾರವು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೆ ತರುವುದರ ಮೂಲಕ ಪಡಿತರವನ್ನು ಈ ವ್ಯವಸ್ಥೆಯ ಮುಖೇನ ಪಡೆಯುವಂತೆ ಸೂಚನೆ ನೀಡಿತು. ಆದರೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ವಿದ್ಯುತ್ ಕೊರತೆಯಿಂದಾಗಿ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತಿದೆ. ಪರಿಣಾಮವಾಗಿ ಶೇ. 20ರಿಂದ 25ರಷ್ಟು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಾಗುತ್ತಿಲ್ಲ. ಈ ಮೊದಲು ಪಡಿತರ ಫಲಾನುಭವಿಗಳ ಮೊಬೈಲ್‌ಗೆ ಸಂದೇಶವನ್ನು ಕಳುಹಿಸುವುದರ ಮೂಲಕ ಕೂಪನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು, ಆ ವ್ಯವಸ್ಥೆಯಡಿ ದುರುಪಯೋಗ ದೂರುಗಳು ಬಂದಿದ್ದರಿಂದ ಈ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಯಿತು. ಆದರೆ ವ್ಯವಸ್ಥೆ ಕೂಡಾ ಜನ ಸಾಮಾನ್ಯರಿಗೆ ಸಮಸ್ಯೆಯನ್ನೇ ತಂದೊಡ್ಡಿದೆ. ಅಲ್ಲದೆ ರೈತರು, ಕೂಲಿ ಕಾರ್ಮಿಕರು ಹೆಚ್ಚಾಗಿ ಪಡಿತರವನ್ನು ಪಡೆಯುತ್ತಿರುವುದರಿಂದ ದೈಹಿಕ ಕೆಲಸಗಳಿಂದಾಗಿ ಅವರ ಹಸ್ತ ರೇಖೆಗಳು ಸವೆದಿರುತ್ತವೆ. ಪರಿಣಾಮವಾಗಿ ಬಯೋಮೆಟ್ರಿಕ್ ಯಂತ್ರ ಅವರ ಬೆರಳಚ್ಚು ಸ್ವೀಕರಿಸುವುದಿಲ್ಲ. ಅಲ್ಲದೆ ಕೂಲಿ ಕಾರ್ಮಿಕರು ಪಡಿತರ ಪಡೆಯಲು ಬಯೋಮೆಟ್ರಿಕ್ ಅವ್ಯವಸ್ಥೆಯಿಂದಾಗಿ ಒಂದು ದಿನದ ತಮ್ಮ ಕಾಯಕವನ್ನು ಬಿಟ್ಟು ಗಂಟೆ ಗಟ್ಟಲೆ ಕಾಯುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಈ ನಿಟ್ಟಿನಲ್ಲಿ ಸರಕಾರವು ಪಡಿತರ ಸಮಸ್ಯೆಗಳಿಗೆ ಕೂಡಲೇ ತೆರೆಯೆಳೆಯಬೇಕಾಗಿದೆ.

Writer - -ರಾಮು ಎಲ್.ಪಿ., ಲಕ್ಕವಳ್ಳಿ

contributor

Editor - -ರಾಮು ಎಲ್.ಪಿ., ಲಕ್ಕವಳ್ಳಿ

contributor

Similar News