ಫೆಲೆಸ್ತೀನ್ ನಲ್ಲಿ ಮೋದಿ: ಯಾಸರ್ ಅರಾಫತ್ ಸ್ಮಾರಕದಲ್ಲಿ ಗೌರವ ಸಲ್ಲಿಸಿದ ಪ್ರಧಾನಿ

Update: 2018-02-10 11:31 GMT

ಹೊಸದಿಲ್ಲಿ, ಫೆ.10: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೆಲೆಸ್ತೀನ್ ಭೇಟಿಯನ್ನು ಇಂದು ಆರಂಭಿಸಿದ್ದು, ಈಗಾಗಲೇ ರಮಲ್ಲಾಹ್ ನಗರ ತಲುಪಿದ್ದು, ಫೆಲೆಸ್ತೀನ್ ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ಇರಲಿದ್ದಾರೆ. ಮೋದಿ ಭೇಟಿಯನ್ನು ಮಹತ್ವಪೂರ್ಣ ಎಂದು ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಅಬ್ಬಾಸ್ ಬಣ್ಣಿಸಿದ್ದಾರೆ.

ರಮಲ್ಲಾಹ್ ತಲುಪಿದ ಕೂಡಲೇ ಮೋದಿ ನೇರವಾಗಿ ಮಾಜಿ ಅಧ್ಯಕ್ಷ ಯಾಸರ್ ಅರಾಫತ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅವರಿಗೆ ಗೌರವ ಸಲ್ಲಿಸಿ ಹೂಗುಚ್ಛ ಇರಿಸಿದರು. ನಂತರ ಅವರು ಅರಾಫತ್ ಮ್ಯೂಸಿಯಂಗೂ ಭೇಟಿ ನೀಡಿದ್ದಾರೆ.

ಜೋರ್ಡಾನ್ ರಾಜಧಾನಿ ಅಮ್ಮಾನ್ ನಿಂದ ಹೆಲಿಕಾಪ್ಟರ್ ಮೂಲಕ ರಮಲ್ಲಾಹ್ ತಲುಪಿದ ಮೋದಿ ಇದು ದ್ವಿಪಕ್ಷೀಯ ಸಹಕಾರದ ನಿಟ್ಟಿನಲ್ಲಿ ಒಂದು ಐತಿಹಾಸಿಕ ಭೇಟಿ ಎಂದು ಬಣ್ಣಿಸಿದ್ದಾರೆ. ಪ್ರಧಾನಿ ಮೋದಿ ಫೆಲೆಸ್ತೀನ್ ಅಧ್ಯಕ್ಷ ಮಹಮೌದ್ ಗೌಸ್ ಅವರ ಜತೆ ಮಾತುಕತೆ ನಡೆಸಿದ್ದು, ನಂತರ ಕೆಲ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ರಮಲ್ಲಾಹ್ ದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಕುರಿತು ಮೋದಿ ಘೋಷಿಸುವ ಸಾಧ್ಯತೆಯಿದೆ.

ಜೋರ್ಡಾನ್ ಭೇಟಿಯ ವೇಳೆ ಪ್ರಧಾನಿ  ಅಲ್ಲಿನ ದೊರೆ ಅಬ್ದುಲ್ಲಾಹ್ ಅವರನ್ನು ಭೇಟಿಯಾಗಿದ್ದರು. ತಮ್ಮ ಮುಂದಿನ ಸಂಯುಕ್ತ ಅರಬ್ ಸಂಸ್ಥಾನ ಭೇಟಿಯ ವೇಳೆ ಪ್ರಧಾನಿ  ಅಲ್ಲಿನ  ದೊರೆ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೌಮ್ ಅವರನ್ನು ಭೇಟಿಯಾಗಲಿದ್ದಾರೆ. ಒಮಾನ್ ನಲ್ಲಿ ಮೋದಿ ಅಲ್ಲಿನ ಪ್ರಮುಖ ನಾಯಕರು ಹಾಗೂ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News