ವಲ್ಲಭಬಾಯಿ ಪಟೇಲ್ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಬಯಸಿದ್ದರು: ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಝ್

Update: 2018-02-10 13:29 GMT

ಹೊಸದಿಲ್ಲಿ, ಫೆ.10: ಸರ್ದಾರ್ ವಲ್ಲಭಬಾಯಿ ಪಟೇಲರು ದೇಶದ ಮೊದಲ ಪ್ರಧಾನಿಯಾಗಿದ್ದರೆ ಕಾಶ್ಮೀರದ ಸಮಸ್ಯೆ ಇರುತ್ತಿರಲಿಲ್ಲ ಎಂದು ಫೆ.7ರಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ನೀಡಿದ ಹೇಳಿಕೆ ಸಂಪೂರ್ಣ ಸುಳ್ಳು. ಇದು ಇತಿಹಾಸದ ವಾಸ್ತವತೆಗೆ ವಿರೋಧವಾಗಿದೆ ಎಂದು ಮಾಜಿ ಕೇಂದ್ರ ಸಚಿವ, ಪ್ರೊಫೆಸರ್ ಸೈಫುದ್ದೀನ್ ಸೋಝ್ ಹೇಳಿದ್ದಾರೆ.        

ಪಟೇಲರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡುಗೆ ನೀಡುವ ಬಗ್ಗೆ ಸತತವಾಗಿ ಪ್ರಸ್ತಾವಿಸಿದ್ದರು. ಆದರೆ ಪಾಕಿಸ್ತಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿಖಾನ್ ಹೈದರಾಬಾದ್ ಡೆಕ್ಕನ್ ಪ್ರದೇಶವನ್ನು (ಈ ನಗರದೊಂದಿಗೆ ಪಾಕಿಸ್ತಾನಕ್ಕೆ ರಸ್ತೆ ಅಥವಾ ರೈಲು ಸಂಪರ್ಕ ಇರಲಿಲ್ಲ) ಪಡೆಯುವ ಕಾಲ್ಪನಿಕ ಆಶಾಭಾವನೆ ಹೊಂದಿದ್ದ ಕಾರಣ ಇದು ಸಾಧ್ಯವಾಗಿಲ್ಲ ಎಂದಿರುವ ಸೋಝ್, ಶೀಘ್ರದಲ್ಲೇ ಪ್ರಕಟವಾಗಲಿರುವ ತಮ್ಮ ಪುಸ್ತಕ 'ಕಾಶ್ಮೀರ: ದಿ ಕಂಪ್ಲೀಟ್ ಸ್ಟೋರಿ'ಯಲ್ಲಿ ಈ ಕುರಿತ ಸಂಪೂರ್ಣ ವಿವರವಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಲಿಯಾಖತ್ ಅಲಿಖಾನ್ ಅವರ ನಿಲುವಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಚೌಧರಿ ಮುಹಮ್ಮದ್ ಆಲಿ ಹಾಗೂ ಮಾಜಿ ಸಚಿವ ಮತ್ತು ಹಿರಿಯ ಮುಸ್ಲಿಂ ಮುಖಂಡ ಸಿರ್ದಾರ್ ಶೌಕತ್ ಹಯಾತ್‌ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಸೋಝ್ ತಿಳಿಸಿದ್ದಾರೆ. ಇತಿಹಾಸವು ವಾಸ್ತವದ ಮೇಲೆ ಆಧರಿತವಾಗಿದೆ. ಇತಿಹಾಸದ ವಿಷಯವನ್ನು ತಮ್ಮ ಆಶಯಕ್ಕೆ ಅನುಕೂಲವಾಗಿ ರಾಜಕಾರಣಿಗಳು ಬಿಂಬಿಸಬಾರದು ಎಂದು ಸೋಝ್ ಹೇಳಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಗಂಭೀರವಾಗಿ ಅಧ್ಯಯನ ನಡೆಸುವ ಮೂಲಕ ನೆಹರೂ ಕುರಿತು ಹಾಗೂ ನೆಹರೂ ಅವರು ಪಟೇಲ್ ಮತ್ತು ಗಾಂಧಿಯವರೊಂದಿಗೆ ಹೊಂದಿದ್ದ ಸಂಬಂಧದ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯಬೇಕು ಎಂದು ಪ್ರಧಾನಿ ಮೋದಿಯವರಿಗೆ ಸಲಹೆ ನೀಡುವುದಾಗಿ ಸೋಝ್ ತಿಳಿಸಿದರು.

ಪ್ರಧಾನಿ ಹೇಳಿಕೆ ತಪ್ಪು ಎಂದು ಹಲವಾರು ಇತಿಹಾಸತಜ್ಞರು ಹೇಳಿಕೆ ನೀಡಿದ್ದಾರೆ. ಎಷ್ಟೇ ಕೆಡುಕುಗಳಿದ್ದರೂ ದೇಶ ವಿಭಜನೆಗೆ ನಾವು ಒಪ್ಪಿರುವುದು ಒಳ್ಳೆಯ ವಿಷಯ. ವಿಭಜನೆಗೆ ಸಮ್ಮತಿಸಿದ ಕುರಿತು ನನಗೆ ವಿಷಾದವೇನಿಲ್ಲ ಎಂದು 1949ರಲ್ಲಿ ಪಟೇಲ್ ಹೇಳಿರುವುದಾಗಿ ಇತಿಹಾಸತಜ್ಞ ಎಸ್.ಇರ್ಫಾನ್ ಹಬೀಬ್ ತಿಳಿಸಿದ್ದಾರೆ.

ಜುನಾಗಡ ಮತ್ತು ಹೈದರಾಬಾದ್ ನಗರಗಳನ್ನು ಭಾರತಕ್ಕೆ ನೀಡಿದರೆ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಪಟೇಲ್ ಪ್ರಸ್ತಾವಿಸಿದ್ದರೆಂದು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಆಲಿ ಭುಟ್ಟೊ 1972ರ ನವೆಂಬರ್ 27ರಂದು ಹೇಳಿದ್ದರು ಎಂದು 'ಫ್ರಂಟ್‌ಲೈನ್' ಪತ್ರಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಖ್ಯಾತ ರಾಜಕೀಯ ವಿಮರ್ಷಕ ಎ.ಜಿ.ನೂರಾನಿ ತಿಳಿಸಿದ್ದಾರೆ.

ಲಂಡಿಕೋಟಲ್ ಎಂಬಲ್ಲಿ ನಡೆದ ಬುಡಕಟ್ಟು ಸಮಾವೇಶದಲ್ಲಿ ಮಾತನಾಡುತ್ತಿದ್ದ ಭುಟ್ಟೋ, ಭಾರತದ ಪ್ರಥಮ ಗೃಹಸಚಿವ ವಲ್ಲಭಬಾಯಿ ಪಟೇಲರು ಜುನಾಗಡ ಹಾಗೂ ಹೈದರಾಬಾದ್‌ಗಳನ್ನು ಕಾಶ್ಮೀರದ ಜೊತೆ ವಿನಿಮಯ ಮಾಡಿಕೊಳ್ಳುವ ಪ್ರಸ್ತಾಪ ಮುಂದಿರಿಸಿದ್ದರು. ಆದರೆ ದುರದೃಷ್ಟವಶಾತ್ ಇದನ್ನು ಒಪ್ಪಿಕೊಳ್ಳಲಾಗಿಲ್ಲ. ಇದರ ಪರಿಣಾಮವಾಗಿ ಈ ಮೂರನ್ನೂ ನೆರೆಯ ರಾಷ್ಟ್ರ ಕೈವಶ ಮಾಡಿಕೊಂಡಿತು ಅಲ್ಲದೆ ಪೂರ್ವ ಪಾಕಿಸ್ತಾನವೂ ನಮ್ಮ ಕೈತಪ್ಪುವಂತಾಯಿತು ಎಂದು ಹೇಳಿದ್ದರು ಎಂದು ಲೇಖನದಲ್ಲಿ ತಿಳಿಸಲಾಗಿದೆ.

1947ರ ನವೆಂಬರ್ 11ರಂದು ಜುನಾಗಡದಲ್ಲಿ ನಡೆದ ಸಭೆಯಲ್ಲಿ ಪಟೇಲರು - ಜುನಾಗಡವನ್ನು ಕಾಶ್ಮೀರದೊಂದಿಗೆ ಹೋಲಿಸುವುದು ಯಾಕೆ. ಹೈದರಾಬಾದ್ ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿ. ಆಗ ನಾವು ಒಂದು ಒಪ್ಪಂದಕ್ಕೆ ಬರಬಹುದು ಎಂದು ಪಾಕಿಸ್ತಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿಖಾನ್ ಅವರಲ್ಲಿ ಪದೇ ಪದೇ ಹೇಳಿದ್ದರು ಎಂದು ಚೌಧರಿ ಮುಹಮ್ಮದ್ ಆಲಿಯವರ 'ದಿ ಎಮರ್ಜೆನ್ಸ್ ಆಫ್ ಪಾಕಿಸ್ತಾನ್' ಕೃತಿಯ (ಪುಟ 299ರಲ್ಲಿ) ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News