ಸಂವಿಧಾನ ಬದಲಿಸುವ ವ್ಯಕ್ತಿಗಳಿಗೆ ಪಾಠ ಕಲಿಸಲು ರಾಜಿರಹಿತ ಹೋರಾಟದ ಅಗತ್ಯವಿದೆ: ಜ್ಞಾನಪ್ರಕಾಶ ಸ್ವಾಮೀಜಿ

Update: 2018-02-10 15:17 GMT

ಬೆಂಗಳೂರು, ಫೆ.10: ಸಂವಿಧಾನ ಬದಲಿಸುವ ಕೋಮುವಾದಿ ವ್ಯಕ್ತಿಗಳಿಗೆ ತಕ್ಕ ಪಾಠ ಕಲಿಸಲು ರಾಜಿರಹಿತ ಹೋರಾಟ ಮಾಡುವಂತಹ ಪ್ರಬಲವಾದ ಸಂಘಟನೆಯ ಅಗತ್ಯವಿದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ.

ಶನಿವಾರ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಪ್ರಾಥಮಿಕ -ಮಾದ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘ ನಗರದ ಶಿಕ್ಷಕರ ಸದನದಲ್ಲಿ ಏರ್ಪಡಿಸಿದ್ದ ‘ಶೈಕ್ಷಣಿಕ ಕಾರ್ಯಾಗಾರ’ದಲ್ಲಿ ಮಾತನಾಡಿದ ಅವರು, ಅನೇಕ ದಲಿತ ಸಂಘಟನೆಗಳ ನಾಯಕರು ತಮ್ಮ ಸ್ವಾರ್ಥಕ್ಕಾಗಿ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿದ್ದಾರೆ. ಇಂತಹ ಸಂಘಟನೆಗಳ ನಾಯಕರನ್ನು ಹೊರತು ಪಡಿಸಿ ಅಂಬೇಡ್ಕರ್ ಸಿದ್ಧಾಂತದಡಿ ರಾಜಿರಹಿತ ಹೋರಾಟ ಮಾಡುವ ಸಂಘಟನೆಯ ಅಗತ್ಯವಿದೆ ಎಂದು ತಿಳಿಸಿದರು.

ಒಂದು ಸಂದರ್ಭದಲ್ಲಿ ಜನಪರ ಸಾಹಿತಿಗಳು ಸಮಾಜದ ಎಚ್ಚರಿಕೆಯ ಧ್ವನಿಗಳಾಗಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅವರಲ್ಲಿಯು ಅವಕಾಶವಾದಿತನ ಮನೆ ಮಾಡಿದೆ. ಸಮಾಜಪರವಾಗಿ ಚಿಂತಿಸುವ, ಮಾರ್ಗದರ್ಶನ ನೀಡುವಂತಹ ಸಾಹಿತಿಗಳು ಸಿಗುವುದು ಕಷ್ಟವಾಗಿದೆ. ಇಂತಹ ಹೊತ್ತಿನಲ್ಲಿ ಅಂಬೇಡ್ಕರ್‌ವಾದಿಗಳು ಪ್ರಜ್ಞಾಪೂರ್ವಕವಾಗಿ ಸಮುದಾಯವನ್ನು ಮುನ್ನಡೆಸಬೇಕಾಗಿದೆ ಎಂದು ಅವರು ಹೇಳಿದರು.

ನಾವು ಶಿಕ್ಷಕರಾಗಿ, ವೈದ್ಯರಾಗಿ, ಎಂಜಿನಿಯರಿಂಗ್ ಆಗಿ ಏನೆ ಕೆಲಸ ಮಾಡುತ್ತಿದ್ದರೂ ಅಂಬೇಡ್ಕರ್‌ವಾದಿ ಸಿದ್ಧಾಂತದಲ್ಲಿ ಮಾತ್ರ ರಾಜಿ ಮಾಡಿಕೊಳ್ಳಬಾರದು. ಅಂಬೇಡ್ಕರ್ ಸಿದ್ಧಾಂತದಿಂದ ಮಾತ್ರ ನಮ್ಮ ಸಮುದಾಯದ ಬದುಕು ಬೆಳಗಲು ಸಾಧ್ಯ. ಈ ನಿಟ್ಟಿನಲ್ಲಿ ದಲಿತ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿಯಿದೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ರಮೇಶ್‌ಬಾಬು ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ಅನಂತಕುಮಾರ್ ಹೆಗಡೆ ಹೇಳಿಕೆಯು ಸಂಘಪರಿವಾರದ ಹಿಡನ್ ಅಜೆಂಡಾವಾಗಿದ್ದು, ಅದರ ಉದ್ದೇಶ ಸಮಾಜವನ್ನು ಒಡೆಯುವುದೇ ಆಗಿದೆ. ಇಂಥವರ ಬಗ್ಗೆ ನಾವು ಸದಾ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದರು. ಈ ವೇಳೆ ಸಂಘದ ಅಧ್ಯಕ್ಷ ವೆಂಕಟೇಶಯ್ಯ, ಪ್ರಧಾನ ಕಾರ್ಯದರ್ಶಿ ಸುಮಿತ್ರಾ ಎಂ.ದುರ್ಗಿ, ಬಿಬಿಎಂಪಿ ಸದಸ್ಯ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News