‘ಕಾಮನ್‌ಮ್ಯಾನ್’ ಅಕ್ಷಯ್

Update: 2018-02-10 18:53 GMT

ಅಕ್ಷಯ್ ಕುಮಾರ್ ನಟಿಸಿರುವ ‘ಪ್ಯಾಡ್‌ಮ್ಯಾನ್’ ಹಿಂದಿ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ, ಪ್ರಶಂಸೆಗೆ ಒಳಗಾಗಿದೆ. ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಪ್ಯಾಡ್‌ಮ್ಯಾನ್ ಎನ್ನುವುದು ತಮಿಳುನಾಡಿನ ಅರುಣಾಚಲಂ ಮುರುಗಾನಂಥಂ ಎಂಬ ಸಾಮಾನ್ಯನೊಬ್ಬನ ಕತೆ. ಮಹಿಳೆಯರು ಮುಟ್ಟಾದ ಸಂದರ್ಭದಲ್ಲಿ ಬಳಸಲು ಬೇಕಾದ ಸ್ಯಾನಿಟರಿ ಪ್ಯಾಡನ್ನು ಕಡಿಮೆ ಖರ್ಚಿನಲ್ಲಿ ತಯಾರಿಸಿ, ಮಹಿಳೆಯರ ಮನವೊಲಿಸಿ, ಸಾಮಾಜಿಕ ಬದಲಾವಣೆ ಬಯಸಿದವನ ಕತೆ. ಹಳ್ಳಿಗಾಡಿನ ಅನಕ್ಷರಸ್ಥನೊಬ್ಬ ಯಶಸ್ವಿ ಉದ್ಯಮಿಯಾದ ಯಶೋಗಾಥೆ.
ಹಾಗಾಗಿ ಚಿತ್ರದ ಗೆಲುವು ಕಾಮನ್‌ಮ್ಯಾನ್ ಗೆಲುವು ಎಂದು ಬಿಂಬಿಸಲಾಗುತ್ತಿದೆ. ನಿಜವಾದ ಪ್ಯಾಡ್‌ಮ್ಯಾನ್ ಅರುಣಾಚಲಂ ಗೆಲುವೆಂದು ವ್ಯಾಖ್ಯಾನಿಸಲಾಗುತ್ತಿದೆ. ಜೊತೆ ಜೊತೆಗೆ ಅಕ್ಷಯ್ಕುಮಾರ್ ಎಂಬ ನಟನನ್ನು ಹಾಡಿ ಹೊಗಳಲಾಗುತ್ತಿದೆ. ಅಕ್ಷಯ್ಕುಮಾರ್ ಎಂಬ ಸೂಪರ್ ಸ್ಟಾರ್, ಮೊದಲು ಆ ಕತೆಯನ್ನು ಕೇಳಿ, ‘ನನಗಿಷ್ಟವಾಗಿದೆ ನಟಿಸುತ್ತೇನೆ’ ಎಂದು ಮುಂದೆ ಬಂದಿದ್ದೇ ಭಾರೀ ಸುದ್ದಿ ಮಾಡಿತ್ತು. ಇನ್ನು ಆ ಪಾತ್ರ ಮಾಡಲು ತಯಾರಿ ಮಾಡಿಕೊಂಡಿದ್ದು, ಅದಕ್ಕಾಗಿ ನಿಜವಾದ ನಾಯಕ ಅರುಣಾಚಲಂರನ್ನು ಭೇಟಿ ಮಾಡಿ, ಅವರ ಕತೆ ಕೇಳಿ, ಅವರೊಂದಿಗೆ ಒಡನಾಡಿ, ಹಾವ-ಭಾವ ಅರಿತು, ಅದಕ್ಕಾಗಿ ಶ್ರಮ-ಸಮಯ ಸುರಿದದ್ದು ಅಕ್ಷಯ್ರನ್ನು ಸದಾ ಸುದ್ದಿಯಲ್ಲಿಟ್ಟಿತ್ತು. ಅರುಣಾಚಲಂ ನಿಜಜೀವನದಲ್ಲಿ ಸಹಜವಾಗಿ ಬದುಕಿದ್ದನ್ನು ಅಕ್ಷಯ್ ಕ್ಯಾಮರಾ ಮುಂದೆ ಬಣ್ಣ ಹಚ್ಚಿಕೊಂಡು ಬದುಕಿದ್ದು- ಈಗ ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿದೆ. ಅರುಣಾಚಲಂನಲ್ಲಿಲ್ಲದ ಗ್ಲ್ಯಾಮರ್ ಅಕ್ಷಯ್‌ನಲ್ಲಿರುವುದರಿಂದ, ಸುದ್ದಿಮಾಧ್ಯಮಳನ್ನು ಅಕ್ಷಯ್ ಆವರಿಸಿಕೊಂಡಿದ್ದಾರೆ.
ಹಾಗೆ ನೋಡಿದರೆ, ಅಕ್ಷಯ್ ಉತ್ತಮ ನಟನೇನೂ ಅಲ್ಲ. ಆದರೆ ಆತ ಪಾತ್ರವನ್ನು ಅರಿತು ಅರಗಿಸಿಕೊಳ್ಳುವ ರೀತಿ, ಪಾತ್ರಗಳ ಪರಕಾಯ ಪ್ರವೇಶ ಮಾಡುವಲ್ಲಿನ ಪ್ರಾಮಾಣಿಕತೆ, ಅದನ್ನು ತೆರೆಯ ಮೇಲೆ ತರುವಾಗ ತೋರುವ ತನ್ಮಯತೆ ಆತನನ್ನು ನಟನನ್ನಾಗಿ ಮಾಡಿದೆ. 50 ವರ್ಷವಾದರೂ ಈಗಲೂ ಚಾಲ್ತಿಯಲ್ಲಿಟ್ಟಿದೆ. ಪಂಜಾಬ್ ಮೂಲದ, ಮಿಲಿಟರಿ ಆಫೀಸರ್ ಮಗನಾದ ಅಕ್ಷಯ್, ಚಿಕ್ಕಂದಿನಲ್ಲಿಯೇ ನಟನಾಗಬೇಕೆಂದು ಆಸೆಪಟ್ಟಿದ್ದ. ಅದಕ್ಕಾಗಿ ಕರಾಟೆ, ಡಾನ್ಸ್ ಕೂಡ ಕಲಿತಿದ್ದ. ದಿಲ್ಲಿಯ ಚಾಂದಿನಿ ಚೌಕ್‌ನಲ್ಲಿ ಎಲ್ಲ ಹುಡುಗರಂತೆ ಆಡಿ ಬೆಳೆದಿದ್ದ. ಸ್ಕೂಲ್ ಡ್ರಾಪ್‌ಔಟ್ ಆಗಿ, ಬ್ಯಾಂಕಾಕ್‌ಗೆ ಹೋಗಿ ಮಾರ್ಷಲ್ ಆರ್ಟ್ಸ್ ಕಲಿತ. ಬದುಕಿಗಾಗಿ ಅಡುಗೆ ಕಲಿತು, ಸಪ್ಲೈಯರ್ ಕೆಲಸ ಮಾಡಿದ. ಮುಂಬೈಗೆ ಹಿಂದಿರುಗಿ ಮಾರ್ಷಲ್ ಆರ್ಟ್ಸ್ ತರಬೇತಿ ಕೇಂದ್ರ ತೆರೆದ. ತರಬೇತಿಗೆ ಬಂದ ಫೋಟೊಗ್ರಾಫರ್ ಕಡೆಯಿಂದ ಮಾಡೆಲ್ ಲೋಕಕ್ಕೆ ಕಾಲಿಟ್ಟು, ಅಲ್ಲಿನ ಹಣ-ಅವಕಾಶಗಳಿಗೆ ಆಸೆಬಿ್ದು ಅಲ್ಲೇ ತಳವೂರಲು ತವಕಿಸಿದ.
ಏತನ್ಮಧ್ಯೆ 1991ರಲ್ಲಿ ಸಿನೆಮಾದಲ್ಲಿ ನಟಿಸುವ ಅವಕಾಶ ಸಿಕ್ಕಿ, ನಟಿಸಿದ ಮೊದಲೆರಡು ಮೂಲೆಗೆ ಸೇರಿ, ಬದುಕು ಬೇರೆ ದಿಕ್ಕಿಗೆ ತಿರುಗುವುದರಲ್ಲಿತ್ತು. ಆಗ ಅಬ್ಬಾಸ್-ಮಸ್ತಾನ್ ಜೋಡಿ ಈತನ ಉರಿಗಟ್ಟಿದ ದೇಹ ಮತ್ತು ಮಾರ್ಷಲ್ ಆರ್ಟ್ಸ್ ಕಲೆಯನ್ನೇ ಮುಖ್ಯವಾಗಿಟ್ಟು ‘ಕಿಲಾಡಿ’ ಎಂಬ ಆ್ಯಕ್ಷನ್ ಚಿತ್ರ ಮಾಡಿತು. ಆ ಚಿತ್ರದ ಗೆಲುವು ಅಕ್ಷಯ್ರನ್ನು ಚಿತ್ರೋದ್ಯಮದಲ್ಲಿ ನೆಲೆಯೂರುವಂತೆ ಮಾಡಿತು. ಅಲ್ಲಿಂದ ಕೈಗೆ ಸಿಕ್ಕ ಆ್ಯಕ್ಷನ್, ಕಾಮಿಡಿ, ರೋಮ್ಯಾಂಟಿಕ್ ಕಥಾವಸ್ತುವಿನ ಚಿತ್ರಗಳನ್ನೆಲ್ಲ ಮಾಡಿದರು. ಇಂಡಿಯನ್ ಜಾಕಿ ಚಾನ್ ಎಂದು ಹೆಸರು ಪಡೆದರು. ಆದರೆ ನಟನೆಯಲ್ಲಿ ಹತ್ತರಲ್ಲಿ ಹನ್ನೊಂದನೆಯವರಾಗಿಯೇ ಉಳಿದುಕೊಂಡರು. ಈ ನಡುವೆ ರಾಜೇಶ್ ಖನ್ನಾ-ಡಿಂಪಲ್‌ರ ಮಗಳು ಟ್ವಿಂಕಲ್ ಖನ್ನಾರನ್ನು ಮದುವೆಯಾದರು. ಎರಡು ಮಕ್ಕಳ ತಂದೆಯಾದರು.
ವರ್ಷಗಳು ಉರುಳಿದಂತೆ ಅಕ್ಷಯ್ ಕೂಡ ಮಾಗಿದರು. ಹಾಲಿವುಡ್‌ನ ಕ್ಲಿಂಟ್ ಈಸ್ಟ್‌ವುಡ್‌ರನ್ನು, ಬಾಲಿವುಡ್‌ನ ಆಮಿರ್ ಖಾನ್‌ರನ್ನು ಮಾದರಿಯನ್ನಾಗಿಟ್ಟುಕೊಂಡ ಅಕ್ಷಯ್, ಅದೇ ರೀತಿಯಲ್ಲಿ ವಯಸ್ಸಿಗೆ ತಕ್ಕಂತಹ ಕತೆ-ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಮುಂದಾದರು. ಸ್ಟಾರ್-ಗ್ಲ್ಯಾಮರ್ ಹ್ಯಾಂಗೋವರ್‌ನಿಂದ ಹೊರಬಂದು ಸ್ಪೆಷಲ್ 26, ಒಎಂಜಿ, ಗಬ್ಬರ್ ಈಸ್ ಬ್ಯಾಕ್, ಏರ್‌ಲಿಫ್ಟ್, ರುಸ್ತುಂ, ಜಾಲಿ ಎಲ್‌ಎಲ್‌ಬಿ-2, ಟಾಯ್ಲೆಟ್- ಏಕ್ ಪ್ರೇಮ್ ಕಥಾದಂತಹ ಒಂದಕ್ಕಿಂತ ಒಂದು ಭಿನ್ನ ಕತೆ, ಪಾತ್ರಗಳಲ್ಲಿ ನಟಿಸಿ, ಕಲಾವಿದ ಎನಿಸಿಕೊಂಡರು. ಕೋಟಿಗಟ್ಟಲೆ ಸಂಪಾದಿಸಿ ಶ್ರೀಮಂತ ನಟರ ಪಟ್ಟಿಗೆ ಸೇರಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸಿ್ತ ಪುರಸ್ಕಾರಗಳಿಗೂ ಪಾತ್ರರಾದರು.
ಈಗ ಅದರ ಮುಂದುವರಿದ ಭಾಗವಾಗಿ ಪ್ಯಾಡ್‌ಮ್ಯಾನ್. ಮಹಿಳೆಯರ ಮುಟ್ಟಿನ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಅರುಣಾಚಲಂ ಎಂಬ ಸಾಮಾನ್ಯ ವ್ಯಕ್ತಿಯ ಕತೆ. ಈ ಕತೆಯನ್ನು ಅಕ್ಷಯ್‌ಕುಮಾರ್‌ಗೆ ಹೇಳಿ, ನಟನೆಗೆ ಒಗ್ಗಿಸಿದ ಕೀರ್ತಿ ಆರ್.ಬಾಲ್ಕಿ ಎಂಬ ಅಪರೂಪದ ನಿರ್ದೇಶಕನಿಗೆ ಸಲ್ಲಬೇಕು. ಚೀನಿಕಂ, ಪಾ, ಇಂಗ್ಲಿಷ್ ವಿಂಗ್ಲಿಷ್, ಶಮಿತಾಭ್, ಕಿ ಆ್ಯಂಡ್ ಕಾ ಎಂಬ ವಿಭಿನ್ನ ಕಥಾಚಿತ್ರಗಳಿಂದ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡವರು. ಬಾಲಿವುಡ್‌ನ ಜಗಮಗಿುವ ಜಗತ್ತಿನಿಂದ ಹೊರತಾದವರು.
ರಿಯಲ್ ಪ್ಯಾಡ್‌ಮ್ಯಾನ್ ಅರುಣಾಚಲಂ ಮಹಿಳೆಯರ ಮನಪರಿವರ್ತನೆಗೆ, ಆ ಮೂಲಕ ಸಾಮಾಜಿಕ ಬದಲಾವಣೆಗೆ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ತನ್ನ ಬದುಕನ್ನೇ ಒತ್ತೆಯಿಟ್ಟ ನಿಜವಾದ ಕ್ರಾಂತಿಕಾರಿ. ಕೊಯಮತ್ತೂರಿನ ನೆಯ್ಗೆ ಮಾಡುವ ಬಡ ಕುಟುಂಬದಲ್ಲಿ ಜನಿಸಿದ ಅರುಣಾಚಲಂ, 15ನೇ ವರ್ಷದವನಾಗಿದ್ದಾಗ ತಂದೆ ತೀರಿಹೋಗಿ, ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿ, ಹೊಟ್ಟೆಪಾಡಿಗಾಗಿ ಕೈಗೆ ಸಿಕ್ಕ ಕೆಲಸಗಳನ್ನೆಲ್ಲ ಕಲಿತವರು. ಬಡತನದಲ್ಲಿಯೇ ಮದುವೆಯಾದರು. ಮಡದಿ ಶಾಂತಿ ಮುಟ್ಟಾದಾಗ ಹಳೆಯ ಹರಿದ ಸೀರೆಗಳನ್ನು ಉಪಯೋಗಿಸುವುದನ್ನು ಕಂಡು ಮರುಗಿದರು. ಮೆಡಿಕಲ್ ಶಾಪ್‌ನಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‌ಗೆ ದುಬಾರಿ ದುಡ್ಡು ಕೊಟ್ಟು ಖರೀದಿಸಲಾಗದೆ ಕೊರಗಿದರು. ಜೊತೆಗೆ ಮನೆಯ ಸಾಂಪ್ರದಾಯಿಕ ಆಚಾರ, ಕಟ್ಟುಪಾಡು, ಮಡಿ-ಮೈಲಿಗೆ. ಮಹಿಳೆಯರಿಗೆ ಮುಟ್ಟಿನ ದಿನಗಳೆಂದರೆ ಮುಜುಗರದ ದಿನಗಳು. ಬಚ್ಚಿಟ್ಟುಕೊಂಡು ಬಳಸುತ್ತಾರೆ, ಬಹಿರಂಗವಾದರೆ ಅಸಹ್ಯ-ಅವಮಾನದಿಂದ ಕುಗ್ಗಿಹೋಗುತ್ತಾರೆ. ದೈಹಿಕ ಹಾಗೂ ಮಾನಸಿಕ ತೊಲಾಟದಿಂದ ಮುದುಡಿಹೋಗುತ್ತಾರೆ.
ಇದನ್ನೆಲ್ಲ ಕಣ್ಣಾರೆ ಕಂಡಿದ್ದ ಅರುಣಾಚಲಂ, ಸ್ಥಳೀಯವಾಗಿ ಸುಲಭದಲ್ಲಿ ಸಿಗುವ ಮರದ ತೊಗಟೆಯ ತಿರುಳಿನಿಂದ ನೂಲಿನಂತಹ ಮೃದುವಾದ ವಸ್ತುವನ್ನು ಬೇರ್ಪಡಿಸಿ, ಹತ್ತಿಯಂತೆ ಕಾಣುವ ತಿರುಳನ್ನು ಪ್ಯಾಡ್ ರೂಪಕ್ಕೆ ತರಲು, ಅಚ್ಚಿನಲ್ಲಿಟ್ಟು ಒತ್ತಲು ಅವರೇ ಕಡಿಮೆ ಖರ್ಚಿನಲ್ಲಿ ಯಂತ್ರ ಕಂಡುಹಿಡಿದರು. ತಾವೇ ತಮ್ಮ ಕೈಯಾರೆ ತಯಾರಿಸಿದ ಪ್ಯಾಡ್ ಅನ್ನು ಮೊದಲಿಗೆ ಮಡದಿ ಕೈಗಿತ್ತರು. ಆದರೆ ಸಾಂಪ್ರದಾಯಿಕ ಕುಟುಂಬದಿಂದ ಬಂದ ಮಡದಿ ಬಳಸದೆ ಬಿಸಾಡಿದರು. ತಂಗಿಯರೂ ತಿರಸ್ಕರಿಸಿದರು. ಅಷ್ಟೇ ಅಲ್ಲ, ಮನೆಯವರೆಲ್ಲ ಸೇರಿ ಹುಚ್ಚನ ಪಟ್ಟ ಕಟ್ಟಿದರು. ಸಂಶೋಧನೆ, ಅನ್ವೇಷಣೆ, ಪ್ರಯೋಗದ ನೆಪದಲ್ಲಿ ಅರುಣಾಚಲಂ ಏಳೂವರೆ ವರ್ಷ ಮಡದಿಯಿಂದ ದೂರವೇ ಉಳಿದರು. ಸ್ಕೂಲು-ಕಾಲೇಜು ವಿದ್ಯಾರ್ಥಿನಿಯರೂ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಾಗ, ತಾವೇ ಒಳಉಡುಪಿನೊಳಗೆ ಸ್ಯಾನಿಟರಿ ಪ್ಯಾಡ್ ಇಟ್ಟು ಪರೀಕ್ಷೆಗೊಳಗಾದರು. ಆಗಲೇ ಅವರಿಗೆ ಮಹಿಳೆ ಎಂದರೆ, ಭೂಮಿ ಮೇಲಿನ ಸೃಷ್ಟಿ ವಿಸ್ಮಯ ಎಂಬುದು ಅನುಭವಕ್ಕೆ ಬಂದದ್ದು.
ಮೊದಲಿಗೆ 65 ಸಾವಿರ ಹೊಂದಿಸಿ 2004ರಲ್ಲಿ ಪ್ಯಾಡ್ ತಯಾರಿಸುವ ಯಂತ್ರವನ್ನು ತಾವೇ ಕಂಡುಹಿಡಿದರು. 2008ರಲ್ಲಿ ನಾಣ್ಯ ಹಾಕಿ ಪ್ಯಾಡ್ ತೆಗೆದುಕೊಳ್ಳಬಹುದಾದ ವೆಂಡರ್ ಮೆಷಿನ್‌ಗಳನ್ನಿಟ್ಟು ಪರೀಕ್ಷಿಸಿದರು. ಮಹಿಳಾ ಸಂಘಗಳಿಗೆ, ಸ್ವಸಹಾಯಕ ಗುಂಪುಗಳಿಗೆ ತಾವೇ ಖುದ್ದು ವಿತರಿಸಿ, ಉಪಯೋಗಿಸಲು ವಿನಂತಿಸಿಕೊಂಡರು. ಸ್ಟೈಲ್ ಫ್ರೀ, ಈಜಿ ಫೀಲ್, ಫ್ರೀ ಸ್ಟೈಲ್, ಬಿ ಫ್ರೀ ಹೆಸರಿನ ಕಡಿಮೆ ಬೆಲೆಯ ನಾಪ್ಕಿನ್‌ಗಳು ಮಾರುಕಟ್ಟೆಯನ್ನು ನಿಧಾನವಾಗಿ ಗೆಲ್ಲತೊಡಗಿದವು. ಇಂದು ಜಯಶ್ರೀ ಇಂಡಸ್ಟ್ರಿಯಾಗಿ ಬೃಹದಾಕಾರವಾಗಿ ಬೆಳೆದು, ಅವರೇ ತಯಾರಿಸಿರುವ ಯಂತ್ರಗಳಿಂದ ಲಕ್ಷಾಂತರ ಜನರು ಉದ್ಯೋಗ ಪಡೆದಿದ್ದಾರೆ. ಎನ್‌ಜಿಒಗಳು, ಸರಕಾರ ಮುಂದೆ ನಿಂತು ಮಹಿಳೆಯರು ಯಂತ್ರ ಖರೀದಿಸಲು ನೆರವಾಗಿ, ಮಹಿಳೆಯರ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿವೆ. ದೇಶ ವಿದೇಶಗಳ ಪ್ರತಿಷ್ಠಿತ ಸಂಸ್ಥೆಗಳು ಅರುಣಾಚಲಂ ಅನ್ವೇಷಣೆಯನ್ನು, ಆವಿಷ್ಕಾರವನ್ನು, ಸಾಮಾಜಿಕ-ಆರ್ಥಿಕ ಬದಲಾವಣೆಯನ್ನು ಮುಕ್ತಕಂಠದಿಂದ ಹೊಗಳಿ ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿವೆ.
ಇಂತಹ ಅರುಣಾಚಲಂ ಇವತ್ತು ಯಶಸ್ವಿ ಉದ್ಯಮಿ. ಹಲವರಿಗೆ ಮಾದರಿ. ಇಂತಹವರ ಸಾಧನೆಯನ್ನು ಬೆಳ್ಳಿತೆರೆಗೆ ತಂದ ಬಾಲ್ಕಿಯಂತಹ ನಿರ್ದೇಶಕರು ಅರುಣಾಚಲಂ ಕತೆಯನ್ನು ಜಗತ್ತಿನ ಮುಂದಿಟ್ಟಿದ್ದಾರೆ. ಯಥಾಪ್ರಕಾರ, ಖ್ಯಾತಿಯು ನಟ ಅಕ್ಷಯ್‌ಕುಮಾರ್ ಖಾತೆಗೂ, ಹಣ ನಿರ್ಮಾಪಕಿ ಟ್ವಿಂಕಲ್ ಖನ್ನಾ ಖಜಾನೆಗೂ ಜಮೆಯಾಗುತ್ತಿದೆ. ರಿಯಲ್ ಕಾಮನ್‌ಮ್ಯಾನ್‌ನ ಕಡು ಕಷ್ಟದ ಬದುಕು ಕಣ್ಮರೆಯಾಗಿ; ಕ್ಯಾಮರಾ ಮುಂದೆ ನಟಿಸಿದ ನಟನ ಬದುಕು ಬಂಗಾರವಾಗುತ್ತಿದೆ.
ಚಿತ್ರರಂಗದ ಜನಕ್ಕೆ ಇದೇನು ಹೊಸದಲ್ಲ. ಸಾಮಾನ್ಯರ ಬದುಕನ್ನು ಬೆಳ್ಳಿತೆರೆಗಿಳಿಸಿ, ಅವರ ಸಾಧನೆಯನ್ನು ಸಾರುತ್ತಲೇ ತಮ್ಮ ವ್ಯಾಪಾರ-ವಹಿವಾಟನ್ನು ಸಾವಿರಾರು ಕೋಟಿಗಳಿಗೆ ವಿಸ್ತರಿಸಿಕೊಳ್ಳುವ ಚಾಣಾಕ್ಷರಿಗೇನೂ ಕೊರತೆಯಿಲ್ಲ. ದಶರಥ ಮಾಂಜಿ ಎಂಬ ಹಳ್ಳಿಯ ಅನಕ್ಷರಸ್ಥನೊಬ್ಬ ತನ್ನ ಮಡದಿಯ ಸಾವಿಗೆ ಸೆಟಗೊಂಡು, ಬೆಟ್ಟ ಅಗೆದು ದಾರಿ ಮಾಡಿದ ಕಥೆಯಾಧರಿಸಿದ ‘ಮಾಂಜಿ; ದ ಮೌಂಟೇನ್‌ಮ್ಯಾನ್’ ಎಂಬ ಚಿತ್ರ- ನವಾಝುದ್ದೀನ್ ಸಿದ್ದಿಕಿ ಎಂಬ ನಟನ ಬದುಕಿಗೆ ಬ್ರೇಕ್ ನೀಡಿತು. ಕಬೀರ್‌ಖಾನ್ ಎಂಬ ಹಾಕಿ ಕೋಚ್ ಕಥೆಯಾಧರಿಸಿದ ‘ಚೆಕ್ ದೇ ಇಂಡಿಯಾ’ ನಿರ್ಮಾಪಕ ಆದಿತ್ಯ ಛೋಪ್ರಾ ಮತ್ತು ನಟ ಶಾರುಕ್‌ಖಾನ್‌ನನ್ನು ಗೆಲ್ಲಿಸಿತು. ಇದೇ ರೀತಿ ಮೇರಿ ಕೋಮ್, ಮಿಲ್ಕಾ ಸಿಂಗ್, ಅಣ್ಣಾ ಹಝಾರೆ ಉದಾಹರಣೆಗಳನ್ನು ಕೊಡುತ್ತಲೇ ಹೋಗಬಹುದು.
ಆಶ್ಚರ್ಯವೆಂದರೆ, ಚಿತ್ರ ನೋಡಿದ ಜನರೂ ಬದಲಾಗು ವುದಿಲ್ಲ. ಸಾಧಕರ ಬದುಕೂ ಹಸನಾಗುವುದಿಲ್ಲ. ಹಾಗೆಯೇ ಮಹಿಳಾ ಕಲ್ಯಾಣ ಕುರಿತು ಮಾತನಾಡುವ ಪ್ರಧಾನಿ ಮೋದಿಯವರ ಸರಕಾರ ಕೂಡ ಮಹಿಳೆಯರ ಮುಟ್ಟಿನ ಸಮಸ್ಯೆ ಬಗ್ಗೆ- ಬಡವರಿಗೆ ಪುಕ್ಕಟೆ ಪ್ಯಾಡ್ ವಿತರಿಸುವ ಬಗ್ಗೆ ಗಂಭೀರವಾಗಿ ಚಿಂತಿಸುವುದಿಲ್ಲ. ಇವತ್ತಿಗೂ ಭಾರತ ದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಉಪಯೋಗಿಸುವವರ ಸಂಖ್ಯೆ ಶೇ. 15ಕ್ಕಿಂತ ಹೆಚ್ಚಿಲ್ಲ. ಆದರೂ ಮೋದಿ, ದೇಶ ಅಭಿವೃದ್ಧಿಯ ಪಥದಲ್ಲಿದೆ ಎಂದು ಹೇಳುವುದನ್ನು ಬಿಟ್ಟಿಲ್ಲ.
ಅರುಣಾಚಲಂ ಸಾಧನೆ, ಅಕ್ಷಯ್ ಕುಮಾರ್ ನಟನೆ, ಚಿತ್ರೋದ್ಯಮದ ಲೆಕ್ಕಾಚಾರ, ಮಾಧ್ಯಮಗಳ ಪ್ರಚಾರ, ಮಹಿಳೆಯರ ಮುಜುಗರ, ಮೋದಿ ಎಂಬ ಮಾತುಗಾರ- ಒಂದಕ್ಕೊಂದು ಸಂಬಂಧವಿಲ್ಲದಂತೆ, ಸಂಬಂಧವಿರುವಂತೆ, ಅಸಂಗತ ನಾಟಕದಂತೆ ನಡೆಯುತ್ತಲೇ ಇದೆ.

 

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News