×
Ad

ಬಿಜೆಪಿ ಅಧಿಕಾರಕ್ಕೆ ಬಂದರೆ ಜನತೆಗೆ ಉಳಿಗಾಲವಿಲ್ಲ : ರಾಘವೇಂದ್ರ ಕುಷ್ಟಗಿ

Update: 2018-02-11 18:37 IST

ಬೆಂಗಳೂರು, ಫೆ.11: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಜನವಿರೋಧಿ ನೀತಿಗಳಿಂದ ಜನತೆ ವಿನಾಕಾರಣ ಸಾಯುವಂತಾಗಿದೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೇನಾದರು ಬಂದರೆ ಜನಪರ ಹೋರಾಟಗಾರರನ್ನು ಒಳಗೊಂಡಂತೆ ಸಾಮಾನ್ಯ ಜನತೆಗೆ ಉಳಿಗಾಲವಿಲ್ಲವೆಂದು ಜನಸಂಗ್ರಾಮ ಪರಿಷತ್ ಮುಖಂಡ ರಾಘವೇಂದ್ರ ಕುಷ್ಟಗಿ ಆತಂಕ ವ್ಯಕ್ತಪಡಿಸಿದರು.

ರವಿವಾರ ಜನಾಂದೋಲನಗಳ ಮಹಾಮೈತ್ರಿ ಶಾಸಕರ ಭವನದಲ್ಲಿ ‘ವಿಧಾನಸಭಾ ಚುನಾವಣೆಯಲ್ಲಿ ಜನಪರ ಕಾರ್ಯಕರ್ತರ ಕಾರ್ಯಸೂಚಿ’ ಕುರಿತು ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನವಿರೋಧಿಯಾಗಿರುವ ಬಿಜೆಪಿ ವಿರುದ್ಧ ಜನತೆಗೆ ಜಾಗೃತಿ ಮೂಡಿಸುವುದು ಜನಪರ ಆಶಯವುಳ್ಳ ಪ್ರತಿಯೊಬ್ಬರ ಕರ್ತವ್ಯವೆಂದು ತಿಳಿಸಿದರು.

ಬಿಜೆಪಿ ಸೋಲಿಸಲು ಸಂಕಲ್ಪ: ರಾಜ್ಯದಲ್ಲಿ ಜನಪರ ಆಶಯವುಳ್ಳವರೆ ಬಹುಸಂಖ್ಯೆಯಲ್ಲಿದ್ದಾರೆ. ಆದರೆ, ಬಿಡಿ, ಬಿಡಿಯಾಗಿ ವಿಭಾಗವಾಗಿರುವುದರಿಂದ ಅದರ ಶಕ್ತಿ ದುರ್ಬಲವಾಗಿದೆ. ನಮ್ಮ ಈ ನೂನ್ಯತೆಯೆ ಕೋಮುವಾದಿ ಬಿಜೆಪಿಗೆ ವರದಾನವಾಗಿದೆ. ಹೀಗಾಗಿ ಕೆಲವು ಸಣ್ಣ ಪ್ರಮಾಣದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಸಂಕಲ್ಪ ತೊಡಬೇಕಾದ ಸಂದರ್ಭವಿದು ಎಂದು ಅವರು ಆಶಿಸಿದರು.

ಇವತ್ತಿನ ಜಾಗತೀಕರಣ, ಆಧುನಿಕ ಸನ್ನಿವೇಶಗಳು ಬಿಜೆಪಿಗೆ ಹೇಳಿ ಮಾಡಿಸಿದಂತಿದೆ. ಹಾಗೂ ದೇಶದ ಸಂಪನ್ಮೂಲಗಳನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿರುವ ಬಂಡವಾಳಶಾಹಿಗಳು ಬಿಜೆಪಿ ಪರವಾಗಿದ್ದಾರೆ. ದುಡಿಯುವ ವರ್ಗದ ವಿರೋಧಿಗಳಾಗಿರುವ ಬಿಜೆಪಿ ಹಾಗೂ ಬಂಡವಾಳಶಾಹಿಗಳು ಒಂದು ನಾಣ್ಯದ ಎರಡು ಮುಖಗಳಿದಂತೆ. ಹೀಗಾಗಿ ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭವಲ್ಲ. ವಸ್ತುನಿಷ್ಟವಾದ ಕಾರ್ಯ ಯೋಜನೆಗಳನ್ನು ಹಾಕಿಕೊಂಡು ರಾಜಕೀಯ ಪ್ರಚಾರ ಮಾಡಬೇಕಾಗಿದೆ ಎಂದು ಅವರು ಹೇಳಿದರು.

ಜನಪರ ಹೋರಾಟಗಾರರು ಚುನಾವಣಾ ರಾಜಕೀಯ ತಂತ್ರಗಳನ್ನು ಅರಿಯದಿದ್ದರೆ ನಮ್ಮ ಚಲನೆ ಮತ್ತಷ್ಟು ಹಿಮ್ಮುಖವಾಗಲಿದೆ. ಈ ಬಾರಿಯ ವಿಧಾನಸಭಾ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ಬಹಳ ಮುಖ್ಯವಾಗಿದ್ದು, ಬಿಜೆಪಿಗೆ ಪರ್ಯಾಯ ಹಾಗೂ ಜನಪರ ಅಭ್ಯರ್ಥಿಗಳ ಪರವಾಗಿ ಮತದಾರರ ಬಳಿ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಹೇಳಿದರು.

ಈ ಚಾರ್ಚಾ ಕಾರ್ಯಕ್ರಮದಲ್ಲಿ ಮಾನವ ಹಕ್ಕು ಹೋರಾಟಗಾರ ನಗರಿ ಬಾಬಯ್ಯ, ಜನಸಂಗ್ರಾಮ ಪರಿಷತ್ ದೀಪಕ್, ಕರ್ನಾಟಕ ಜನಶಕ್ತಿಯ ಡಾ.ವಾಸು, ಮಲ್ಲಿಗೆ, ಗೌರಿ, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಎಐಡಿವೈಒ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News