ಚರಿತ್ರೆ ಸತ್ಯ-ಅಸತ್ಯ ಮೀರಿದ್ದು: ಡಾ.ಸಿಎನ್‌ಆರ್
ಬೆಂಗಳೂರು, ಫೆ.11: ಜಗತ್ತಿನ ಯಾವು ಚರಿತ್ರೆಗೂ ಏಕ ಮುಖವಾಗಿರುವಂತಹ ಒಳ್ಳೆಯದ್ದು, ಕೆಟ್ಟದ್ದು ಎಂಬ ಚೌಕಟ್ಟು ಇರುವುದಿಲ್ಲ. ಇದು ಆ ಚರಿತ್ರೆಯಲ್ಲಿ ಬರುವ ನಾಯಕರಿಗೂ ಅನ್ವಯಿಸುತ್ತದೆ ಎಂದು ಹಿರಿಯ ವಿಮರ್ಶಕ ಡಾ.ಸಿ.ಎನ್. ರಾಮಚಂದ್ರನ್ ಅಭಿಪ್ರಾಯಿಸಿದರು.
ರವಿವಾರ ಆಕೃತಿ ಆಶಯ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ತಳುನಾಡಿನ ಹಿರಿಯ ಸಾಹಿತಿ ಡಿ.ಕೆ.ಚೌಟರವರ ‘ಮಿತ್ತಬೈಲು ಯಮುನಕ್ಕ’ ಇಂಗ್ಲಿಷ್ ಅನುವಾದ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಯಾವ ಚರಿತ್ರೆಯು ಸರಳ ರೇಖೆಯಂತೆ ಸರಳವಾಗಿರುವುದಿಲ್ಲ, ಪ್ರತಿ ಚರಿತ್ರೆಯೂ ಬಹು ಆಯಾಮಗಳನ್ನು ಹೊಂದಿರುತ್ತದೆ. ಹೀಗಾಗಿ ಯಾವುದೆ ಚರಿತ್ರೆಯನ್ನು ಯಾರಿಂದಲೂ ಸಂಪೂರ್ಣವಾಗಿ ಅರಿಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಟಿಪ್ಪು ಸುಲ್ತಾನ್ ಮಾಡಿದ್ದೆಲ್ಲವೂ ಕೆಟ್ಟದ್ದು, ಇಲ್ಲವೆ ಒಳ್ಳೆಯದು ಎಂದು ಸೀಮಿತವಾಗಿ ಅರ್ಥೈಸಲು ಸಾಧ್ಯವಿಲ್ಲ. ಚರಿತ್ರೆಯ ಆಯಾಮಗಳು ಬಹುಮುಖತೆಯನ್ನು ಹೊಂದಿದ್ದು, ಪ್ರತಿಘಟನೆಯು ಹಲವಾರು ಹಿನ್ನೆಲೆಗಳನ್ನು ಹೊಂದಿರುತ್ತವೆ. ಹಾಗೆಯೆ ಬ್ರಿಟಿಷರು ಮಾಡಿದೆಲ್ಲವೂ ಅನಾಚಾರವಾಗಿರಲಿಲ್ಲ. ಹೀಗೆ ನಮ್ಮ ಚರಿತ್ರೆಗಳು ಹಲವು ಸಂಕಿರ್ಣತೆಗಳನ್ನು ಒಳಗೊಂಡಿರುತ್ತವೆ. ಇದನ್ನು ಅರ್ಥ ಮಾಡಿಕೊಳ್ಳದೆ ತಮ್ಮ ಸ್ವಾರ್ಥಕ್ಕೆ ಬೇಕಾದ ರೀತಿಯಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ವಿಷಾಧಿಸಿದರು.
ನಮ್ಮ ನಾಡಿನ ಹಿರಿಯ ಸಾಹಿತಿ ಡಿ.ಕೆ.ಚೌಟರವರ ‘ಮಿತ್ತಬೈಲು ಯಮನಕ್ಕ’ ಕಾದಂಬರಿಯಲ್ಲಿ ತುಳುನಾಡಿನ ಸ್ವಾತಂತ್ರ ಪೂರ್ವದ ಚರಿತ್ರೆಯನ್ನು ಹಲವು ಮುಖಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಕಾದಂಬರಿಯಲ್ಲಿ ಬರುವ ಪ್ರತಿ ಪಾತ್ರಕ್ಕೂ ಒಂದೆ ಬಣ್ಣ ಇರುವುದಿಲ್ಲ. ಒಳ್ಳೆಯವರಲ್ಲಿ ಕೆಟ್ಟಗುಣ, ಕೆಟ್ಟವರಲ್ಲಿ ಒಳ್ಳೆಯ ಗುಣಗಳು ಅಡಗಿರುತ್ತದೆ ಎಂಬುದನ್ನು ತಮ್ಮ ಕಾದಂಬರಿಯಲ್ಲಿ ವಿವರಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಬಿ.ಎ.ವಿವೇಕ್‌ರೈ, ಮಿತ್ತಬೈಲ್ ಯಮುನಕ್ಕ ಕಾದಂಬರಿಯ ಅನುವಾದಕರಾದ ಪ್ರೊ.ಬಿ.ಸುರೇಂದ್ರ ರಾವ್, ಕೆ.ಚಿನ್ನಪ್ಪ ಗೌಡ ಹಾಗೂ ಕಾದಂಬರಿಕಾರ ಡಿ.ಕೆ.ಚೌಟ ಉಪಸ್ಥಿತರಿದ್ದರು. ಈ ವೇಳೆ ಕಾದಂಬರಿಯ ಆಯ್ದ ಭಾಗವನ್ನು ಕಲಾವಿದರು ನಾಟಕ ರೂಪದಲ್ಲಿ ಅಭಿನಯಿಸಿದರು.