‘ದಾರಿದೀಪ’ ಎ.ಕೆ.ಸುಬ್ಬಯ್ಯ: ಫೆ.25ಕ್ಕೆ ಅಭಿನಂದನಾ ಸಮಾರಂಭ
ಬೆಂಗಳೂರು, ಫೆ. 12: ಮಾಜಿ ಶಾಸಕ, ವಿಚಾರವಾದಿ ಹಾಗೂ ಹಿರಿಯ ವಕೀಲ ಎ.ಕೆ.ಸುಬ್ಬಯ್ಯರವರ ಅಭಿನಂದನಾ ಸಮಾರಂಭವನ್ನು ಫೆ.25ರ ಸಂಜೆ 5ಗಂಟೆಗೆ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
‘ದಾರಿದೀಪ’ ಅಭಿನಂದನಾ ಗ್ರಂಥವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದು, ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಸುಬ್ಬಯ್ಯನವರ ಸಮಗ್ರ ಬರಹಗಳ ಗ್ರಂಥ ‘ಸೌಹಾರ್ದ ಸೆಲೆ’ ಕೃತಿಯನ್ನು ಹಿರಿಯ ಸಾಹಿತಿ ದೇವನೂರ ಮಹಾದೇವ ಬಿಡುಗಡೆ ಮಾಡಲಿದ್ದಾರೆ.
ಸಮಾರಂಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್. ರಮೇಶ್ ಕುಮಾರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮಾಜಿ ಸಚಿವ ಎಂ.ಸಿ.ನಾಣಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸುಬ್ಬಯ್ಯರವರ ಜೀವನ ಚರಿತ್ರೆ ‘ನಿರ್ಭೀತಿಯ ಹೆಜ್ಜೆಗಳು’ ಕೃತಿಯನ್ನು ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಲೋಕಾರ್ಪಣೆ ಮಾಡಲಿದ್ದಾರೆ.
ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನ ಬೆಳ್ಳೂರಿನಲ್ಲಿ ಅಜ್ಜಿಕುಟೀರ ಕಾರ್ಯಪ್ಪ ಮತ್ತು ಸೀತಮ್ಮ ದಂಪತಿ ಪುತ್ರನಾಗಿ 1934ರ ಆಗಸ್ಟ್ 8ರಂದು ಜನಿಸಿದ ಎ.ಕೆ.ಸುಬ್ಬಯ್ಯ ಯಶಸ್ವಿ ರಾಜಕಾರಣಿಯಾಗಿ, ರೈತನಾಗಿ, ವಕೀಲರಾಗಿ ಮತ್ತು ಆಕ್ಟಿವಿಸ್ಟ್ ಆಗಿ ದುಡಿದು ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದಾರೆ.
ನೇರ ನಡೆ-ನುಡಿಗೆ ಹೆಸರಾದ ಸುಬ್ಬಯ್ಯನವರು ರಾಜಕೀಯವನ್ನು ಸದಾ ಭ್ರಷ್ಟಾಚಾರ, ಕೋಮುವಾದ, ಸ್ವಜನಪಕ್ಷಪಾತ ಮತ್ತು ಅನ್ಯಾಯಗಳನ್ನು ವಿರೋಧಿಸುವ ವೇದಿಕೆಯೆಂದೇ ಭಾವಿಸಿದರು. ಹುಸಿ ರಾಷ್ಟ್ರೀಯವಾದಿಯಾಗಿ ನಿರ್ದಿಷ್ಟ ಜಾತಿ, ಕೋಮುವನ್ನು ಓಲೈಸುವ ಓಟ್ ಬ್ಯಾಂಕ್ ರಾಜಕಾರಣವನ್ನು ಎಂದೂ ಮಾಡಲಿಲ್ಲ. ಕೋಮುವಾದ ವಿರೋಧಿ, ಅಭಿವ್ಯಕ್ತಿ ಸ್ವಾತಂತ್ರದ ಪರವಾದ ಹೋರಾಟಗಳನ್ನು ತಮ್ಮನ್ನು ತೊಡಗಿಸಿಕೊಂಡಿದ್ದ ಸುಬ್ಬಯ್ಯ, ಜನಸಂಘ ಮತ್ತು ಬಿಜೆಪಿಯಲ್ಲಿ ಬಹುಕಾಲ ಕೆಲಸ ಮಾಡಿದ್ದರು. ಆ ಬಳಿಕ ಅಲ್ಲಿನ ಹಿಂದುತ್ವದ ಹಿಡನ್ ಅಜೆಂಡಾಗಳು ಮತ್ತು ಅನೈತಿಕತೆಯನ್ನು ವಿರೋಧಿ ಹೊರ ಬಂದಿದ್ದರು.
1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ವೇಳೆ ರಾಜ್ಯಾದ್ಯಂತ ಶಾಂತಿ ಯಾತ್ರೆ ನಡೆಸುವ ಮೂಲಕ ಸೌಹಾರ್ದತೆ ಮೂಡಿಸಿದ್ದರು. ನ್ಯಾಯಪರ ಹೋರಾಟಗಾರ ಹೇಗಿರಬಲ್ಲ ಎಂಬುದಕ್ಕೆ ಎ.ಕೆ.ಸುಬ್ಬಯ್ಯ ಉದಾಹರಣೆಯಾಗಿದ್ದಾರೆ ಎಂದು ಎ.ಕೆ. ಸುಬ್ಬಯ್ಯನವರ ಅಭಿನಂದನಾ ಸಮಿತಿ ತಿಳಿಸಿದೆ.