ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಗಳಾಗಿ ದಿನೇಶ್ ಮಹೇಶ್ವರಿ ಅಧಿಕಾರ ಸ್ವೀಕಾರ

Update: 2018-02-12 15:24 GMT

ಬೆಂಗಳೂರು, ಫೆ.12: ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ನ್ಯಾ.ದಿನೇಶ್ ಮಹೇಶ್ವರಿ ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನ್ಯಾ.ದಿನೇಶ್ ಮಹೇಶ್ವರಿ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಸ್ಥಾನ ಮೂಲದ ದಿನೇಶ್ ಮಹೇಶ್ವರಿ 2016ರ ಫೆಬ್ರವರಿ 24ರಿಂದ ಮೇಘಾಲಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಜನವರಿ 10ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಸದಸ್ಯರ ಕೊಲಿಜಿಯಂ ದಿನೇಶ್ ಮಹೇಶ್ವರಿ ಅವರನ್ನು ನೇಮಕ ಮಾಡಲು ತೀರ್ಮಾನಿಸಿತ್ತು, ಕೇಂದ್ರ ಸರಕಾರಕ್ಕೆ ಹೆಸರನ್ನು ಶಿಫಾರಸು ಮಾಡಲಾಗಿತ್ತು.

2017ರ ಅಕ್ಟೋಬರ್‌ನಲ್ಲಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ನಿವೃತ್ತರಾಗಿದ್ದರು. ನಂತರ ಎಚ್.ಜಿ.ರಮೇಶ್ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. ದಿನೇಶ್ ಮಹೇಶ್ವರಿ ಅವರು ಮಂಗಳೂರಿನಲ್ಲಿರುವ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ದಿನೇಶ್ ಮಹೇಶ್ವರಿ ಹುಟ್ಟಿದ್ದು 1958ರ ಮೇ 15ರಂದು. ಇವರ ತಂದೆ ರಮೇಶ್ಚಂದ್ರ ಮಹೇಶ್ವರಿ. ತಾಯಿ ರುಮ್ಕಿಣಿ ಮಹೇಶ್ವರಿ. ತಂದೆ ರಮೇಶ್ಚಂದ್ರ ಅವರು, ರಾಜಸ್ಥಾನ ಹೈಕೋರ್ಟ್‌ನ ಖ್ಯಾತ ವಕೀಲರಾಗಿದ್ದವರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News