×
Ad

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದೂ ಅಲ್ಲ, ಜೈನ: ರಾಮಲಿಂಗಾರೆಡ್ಡಿ

Update: 2018-02-12 20:30 IST

ಬೆಂಗಳೂರು, ಫೆ.12: ಬಿಜೆಪಿಯವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವಂತೆ ವರ್ತಿಸುತ್ತಿದ್ದಾರೆ. ಅವರು ಮಾತ್ರ ಹಿಂದೂಗಳೇ? ನಾವೆಲ್ಲ ಹಿಂದೂಗಳಲ್ಲವೇ? ಮತ ಗಳಿಕೆಗಾಗಿ ಮಾತ್ರ ಬಿಜೆಪಿಯವರು ಪದೇ ಪದೇ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ ಧರ್ಮದವರಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಿಂದೂನೇ ಅಲ್ಲ. ಆದರೂ, ಅವರು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ಜನಸಾಮಾನ್ಯರ ಎದುರು ಮಾತನಾಡುತ್ತಾರೆ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ನೀಡುವುದನ್ನು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ತಿರುಗೇಟು ನೀಡಿದ ಅವರು, ಈ ಹಿಂದೆ ಮಾಜಿ ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿಯೂ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ಅದೇ ರೀತಿ ರಾಹುಲ್‌ಗಾಂಧಿಯೂ ದೇವಾಲಯಗಳಿಗೆ ಹೋಗುತ್ತಿದ್ದಾರೆ. ಅಷ್ಟಕ್ಕೆಲ್ಲ ಇವರು ಯಾಕೆ ಕಿರುಚಾಡುತ್ತಿದ್ದಾರೆ ಎಂದರು.

ರಾಹುಲ್‌ಗಾಂಧಿ ದೇವಾಲಯಗಳಿಗೆ ಭೇಟಿ ನೀಡುವುದರಲ್ಲಿ ತಪ್ಪೇನಿದೆ? ಬಿಜೆಪಿಯವರಿಗೆ ಕೇವಲ ತಪ್ಪುಗಳನ್ನು ಹುಡುಕುವುದೇ ಕೆಲಸವಾಗಿದೆ. ಇದು ಚುನಾವಣೆಯ ಕಾಲ. ಆದುದರಿಂದ, ಬಿಜೆಪಿಯವರು ತಮ್ಮನ್ನು ಹಿಂದೂ ಧರ್ಮದ ವಾರಸುದಾರರೆಂದು ಹೇಳಿಕೊಳ್ಳಲು ಹೊರಟಿದ್ದಾರೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ಸ್ಲಂಗಳಿಗೆ ಭೇಟಿ ನೀಡಿರುವ ಬಗ್ಗೆ ಟೀಕಿಸಿದ ರಾಮಲಿಂಗಾರೆಡ್ಡಿ, ಸ್ಲಂಗಳಿಗೆ ಬೆಳಗಿನ ಹೊತ್ತು ಹೋದರೆ ಅಲ್ಲಿರುವ ಸಮಸ್ಯೆಗಳು, ಸ್ಥಿತಿಗತಿಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಆದರೆ, ಇವರು ರಾತ್ರಿ ಹೊತ್ತು ಹೋಗುತ್ತಾರೆ ಎಂದರು.
ಸ್ಲಂಗಳಲ್ಲಿ ರಾತ್ರಿ ವಾಸ್ತವ್ಯ ಹೂಡುವ ಇವರು ಕೊಳಗೇರಿಗಳನ್ನು ಉದ್ಧಾರ ಮಾಡುತ್ತಾರಾ? ಬಿಜೆಪಿ ಅಧಿಕಾರದಲ್ಲಿದ್ದಾಗ ನಮ್ಮ ರಾಜ್ಯವನ್ನು ಕೊಳಗೇರಿ ಮುಕ್ತ ರಾಜ್ಯವನ್ನಾಗಿ ಮಾಡಬಹುದಿತ್ತಲ್ಲ? ಇವರು ಕೊಳಗೇರಿಗಳಲ್ಲಿ ವಾಸ್ತವ್ಯ ಹೂಡಲು ಹೈಟೆಕ್ ಹಾಸಿಗೆ ಮತ್ತು ಕಮೋಡ್‌ಗಳನ್ನು ಬಳಸುತ್ತಾರೆ ಎಂದು ಆರೋಪಿಸದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು, ರಾಜ್ಯದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದೆ. ಆದರೆ, ಬಿಜೆಪಿಯವರು ಚುನಾವಣೆಗೂ ಮುನ್ನ ಭರವಸೆ ಕೊಡುತ್ತಾರೆ. ನಂತರ ಅವುಗಳನ್ನು ಮರೆತು ಬಿಡುತ್ತಾರೆ. ಹೀಗಾಗಿ ಕೊಳಗೇರಿ ವಾಸದಿಂದ ಅಲ್ಲಿನ ಜನರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News