ಸರಣಿ ಅಪಘಾತ: ಮಹಿಳೆ ಮೃತ್ಯು
ಬೆಂಗಳೂರು, ಫೆ.12: ವೇಗವಾಗಿ ಹೋಗುತ್ತಿದ್ದ ಕ್ಯಾಂಟರ್ ಮುಂದೆ ಚಲಿಸುತ್ತಿದ್ದ ಟಾಟಾ ಏಸ್, ಬೈಕ್ ಹಾಗೂ ಕೆಸ್ಸಾರ್ಟಿಸಿ ಬಸ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲೆ ಮೃತಪಟ್ಟು, ಆಕೆಯ ಪತಿ, ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಬಾಬುಸಾಪಾಳ್ಯದಲ್ಲಿ ನಡೆದಿದೆ.
ನಗರದ ಬೂದಿಗೆರೆ ನಿವಾಸಿ ಸಲ್ಮಾ ಆಯೇಷಾ(28) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಪತಿ ಚಾಂದ್ ಪಾಷಾ ಹಾಗೂ ಇಬ್ಬರು ಮಕ್ಕಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ.
ರವಿವಾರ ರಾತ್ರಿ 9.40ರ ಸುಮಾರಿಗೆ ಸಾರಾಯಿ ಪಾಳ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಬುಸಾಬ್ ಪಾಳ್ಯದ ರಿಂಗ್‌ರಸ್ತೆ ಬಳಿ ಹಿಂದಿನಿಂದ ಬಂದ ಕ್ಯಾಂಟರ್ ಟಾಟಾ ಏಸ್‌ಗೆ ಢಿಕ್ಕಿ ಹೊಡೆದು ಬೈಕ್‌ಗೆ ಗುದ್ದಿದೆ. ಈ ವೇಳೆ ಕೆಎಸ್ಸಾರ್ಟಿಸಿ ಬಸ್ ಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಅಪಘಾತದಿಂದ ನಾಲ್ಕು ವಾಹನಗಳಿಗೆ ಹಾನಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ಬಾಣಸವಾಡಿ ಸಂಚಾರ ಪೊಲೀಸರು ಕ್ಯಾಂಟರ್ ಚಾಲಕನನ್ನು ಬಂಧಿಸಿ, ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.