ಕದಿರೇಶ್ ಹತ್ಯೆ ಪ್ರಕರಣ: ಇಬ್ಬರ ಬಂಧನ
Update: 2018-02-12 21:08 IST
ಬೆಂಗಳೂರು, ಫೆ.12: ಬಿಜೆಪಿ ಮುಖಂಡ, ಮಾಜಿ ಕಾಪೊರೇಟರ್ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ನಗರದ 24ನೆ ಎಸಿಎಂಎಂ ನ್ಯಾಯಾಲಯವು ಹತ್ತು ದಿನಗಳ ಕಾಲ ವಿಚಾರಣೆಗಾಗಿ ಕಾಟನ್‌ಪೇಟೆ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ.
ಕದಿರೇಶ್ ಹತ್ಯೆ ನಡೆದ ಬಳಿಕ ಆರೋಪಿಗಳಾದ ವಿನಯ್, ನವೀನ್ ಇಬ್ಬರೂ ಆಂಧ್ರಪ್ರದೇಶಕ್ಕೆ ಓಡಿ ಹೋಗಿ ತಲೆಮರೆಸಿಕೊಂಡಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರ ತಂಡವನ್ನು ರಚಿಸಲಾಗಿತ್ತು. ಆರೋಪಿಗಳಾದ ವಿನಯ್, ನವೀನ್ ಇಬ್ಬರೂ ಕೋರ್ಟ್‌ಗೆ ತಾವೆ ಖುದ್ದಾಗಿ ಹಾಜರಾಗಿದ್ದು, ಪೊಲೀಸರ ಪರ ವಕೀಲರು ಆರೋಪಿಗಳನ್ನು ವಿಚಾರಣೆ ನಡೆಸಲು 15 ದಿನಗಳ ಕಾಲ ವಶಕ್ಕೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು.
ನ್ಯಾಯಪೀಠವು ಆರೋಪಿಗಳನ್ನು 10 ದಿನಗಳ ಕಾಲ ವಿಚಾರಣೆಗೆ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತು. ಇನ್ನು ಉಳಿದ ಮೂವರು ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.