ಯಲಹಂಕದಿಂದ ಓರಿಯನ್ ಮಾಲ್‌ಗೆ ಬಿಎಂಟಿಸಿ ಬಸ್ ಸೇವೆ
ಬೆಂಗಳೂರು,ಫೆ. 12: ಯಲಹಂಕ ಹಳೆ ಬಸ್ ನಿಲ್ದಾಣದಿಂದ ರಾಜಾಜಿನಗರದ ಓರಿಯನ್ ಮಾಲ್‌ಗೆ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಿಂದ ನೂತನವಾಗಿ ಬಸ್ ಸೇವೆ ಆರಂಭಿಸಲಾಗಿದೆ.
ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೌಲಭ್ಯ ಮತ್ತು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಎರಡು ಹೊಸ ಅನುಸೂಚಿಗಳ ಕಾರ್ಯಾಚರಣೆಯನ್ನು ಫೆ.1ರಿಂದಲೇ ಆರಂಭಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಎಂಎಲ್-1, ಎಂಎಲ್-2 ಯಲಹಂಕ ಹಳೇ ಬಸ್ ನಿಲ್ದಾಣದಿಂದ ಓರಿಯಾನ್ ಮಾಲ್. ಯಲಹಂಕ, ಅಲ್ಲಾಳಸಂದ್ರ, ಬ್ಯಾಟರಾಯನಪುರ, ಡೈರಿ ಗೇಟ್, ಹೆಬ್ಬಾಳ ರಿಂಗ್ ರಸ್ತೆ, ದೇವಿನಗರ, ದೇವಸಂದ್ರ, ಸದಾಶಿವನಗರ ಪೊಲೀಸ್ ಠಾಣೆ, ಯಶವಂತಪುರ, ಓರಿಯಾನ್ ಮಾಲ್‌ಗೆ ಸಂಚರಿಸಲಿದೆ.
ಸದರಿ ಮಾರ್ಗಗಳು ಸಾಮಾನ್ಯಪಾಳಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 7.45ರ ವರೆಗೂ ಒಟ್ಟು 24 ಸುತ್ತುವಳಿಗಳಲ್ಲಿ ಕಾರ್ಯಾಚರಣೆ ಮಾಡಲಿದೆ. ಮೇಲ್ಕಂಡಂತೆ, ಸಂಸ್ಥೆಯ ನೂತನ ಸೇವೆಗಳನ್ನು ಸಾರ್ವಜನಿಕ ಪ್ರಯಾಣಿಕರು ಉಪಯೋಗಿಸುವ ಮೂಲಕ ನಗರ ಮಾಲಿನ್ಯ ಕಡಿಮೆ ಮಾಡಲು ಸಹಕರಿಸಲು ಸಂಸ್ಥೆ ಕೋರಿದೆ.