ರಾಹುಲ್‌ಗಾಂಧಿ ವಿರುದ್ಧ ಪ್ರಕಾಶ್ ಜಾವ್ಡೇಕರ್ ವಾಗ್ದಾಳಿ
ಬೆಂಗಳೂರು, ಫೆ.12: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರಕಾರದ ವಿರುದ್ಧ ಟೀಕೆಗಳನ್ನು ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ವಿರುದ್ಧ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿ, ಸಿದ್ದರಾಮಯ್ಯರಿಂದ ಏನನ್ನು ಕಲಿಯಬೇಕು? ಐಟಿಬಿಟಿ ಸಿಟಿಯನ್ನು ಕ್ರೈಂ ಸಿಟಿ ಹೇಗೆ ಮಾಡಬೇಕು ಎಂಬುದನ್ನು ಕಲಿಯಬೇಕೇ ಎಂದರು.
ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ರಾಜ್ಯದ ಮುಖ್ಯಮಂತ್ರಿಗಳು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ರೈತರ ಸಾಲವನ್ನು ಮನ್ನಾ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಮೋದಿ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದಾರೆ. ಅವರ ಬ್ಯಾಟಿಂಗ್ ತೀವ್ರತೆಯನ್ನು ತಡೆಯಲು ರಾಹುಲ್‌ಗಾಂಧಿಗೆ ಸಾಧ್ಯವಾಗುತ್ತಿಲ್ಲ. ವಿಕೆಟ್ ಕೀಪರ್‌ನಂತೆ ಹಿಂದೆ ನಿಂತುಕೊಂಡು ಮೋದಿ ಆಡಳಿತವನ್ನು ನೋಡುತ್ತಿದ್ದಾರೆ ಎಂದು ಪ್ರಕಾಶ್ ಜಾವ್ಡೇಕರ್ ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಭ್ರಷ್ಟಾಚಾರ ರಹಿತವಾದ ಆಡಳಿತವನ್ನು ನರೇಂದ್ರಮೋದಿ ನೀಡಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ರಾಹುಲ್‌ಗಾಂಧಿ ಒಮ್ಮೆ ತಮ್ಮ ಆಡಳಿತಾವಧಿಯನ್ನು ಹಿಂದಿರುಗಿ ನೋಡಲಿ ಎಂದು ಅವರು ಹೇಳಿದರು.
ಬೆಂಗಳೂರು ಮತ್ತೊಂದು ಕೇಪ್‌ಟೌನ್ ಆಗಬಾರದು. ನಾವು ಒಂದು ವರ್ಷ, ಐದು ವರ್ಷದ ಯೋಜನೆಗಳನ್ನು ರೂಪಿಸಿ, ನಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸುತ್ತೇವೆ. ನದಿಗಳ ಜೋಡಣೆ ವಿಷಯವೇ ಪ್ರಮುಖವಾಗಿರುತ್ತದೆ ಎಂದು ಪ್ರಕಾಶ್ ಜಾವ್ಡೇಕರ್ ತಿಳಿಸಿದರು.
ಟಿಪ್ಪು ಜಯಂತಿ ಮಾಡಿದ ರಾಜ್ಯ ಸರಕಾರ ಜನರ ನೆಮ್ಮದಿಗೆ ಬೆಂಕಿ ಹಚ್ಚಿದೆ. ಈಗ ಬಹಮನಿ ಸುಲ್ತಾನರ ಉತ್ಸವ ನಡೆಸಲು ಉದ್ದೇಶಿಸಿದೆ. ಬಹಮನಿ ಸುಲ್ತಾನರು ಜನರನ್ನು ಕಗ್ಗೊಲೆ ಮಾಡಿದ ಇತಿಹಾಸವುಳ್ಳವರು. ಅವರ ಹೆಸರಿನಲ್ಲಿ ಉತ್ಸವ ಮಾಡಬಾರದು. ಇದಕ್ಕೆ ನಮ್ಮ ವಿರೋಧವಿದೆ. ಇದು ಕಾಂಗ್ರೆಸ್‌ನ ಕುರ್ಚಿ ಉಳಿಸಿಕೊಳ್ಳುವ ಓಟ್ ಬ್ಯಾಂಕ್ ರಾಜಕಾರಣ.
-ಶೋಭಾ ಕರಂದ್ಲಾಜೆ, ಬಿಜೆಪಿ ಸಂಸದೆ