ಬೆಂಗಳೂರಿನಲ್ಲಿ ನೀರಿನ ಅಭಾವವಿಲ್ಲ: ಕೆ.ಜೆ.ಜಾರ್ಜ್
ಬೆಂಗಳೂರು, ಫೆ. 12: ನೀರಿನ ಅಭಾವ ಕಾಡುತ್ತಿರುವ ಜಗತ್ತಿನ 11 ಮಹಾನಗರಗಳಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿದೆ ಎಂದು ಬಿಬಿಸಿ ಬಿಡುಗಡೆ ಮಾಡಿರುವ ವರದಿಯನ್ನು ಅಲ್ಲಗಳೆದಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ನಗರಕ್ಕೆ ಸದ್ಯಕ್ಕೆ ನೀರಿನ ಅಭಾವ ತಲೆದೋರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ನಗರದ ಜಲಮಂಡಳಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ 1400 ಎಂಎಲ್‌ಡಿ ನೀರು ಹರಿದುಬರುತ್ತಿದೆ. ಕಾವೇರಿ 5ನೇ ಹಂತದಿಂದ 775 ಎಂಎಲ್‌ಡಿಯಷ್ಟು ನೀರು ತರಲು ಯೋಜನೆ ಸಿದ್ಧಪಡಿಸಲಾಗಿದೆ. ನಗರಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಅಭಾವ ಕಾಡದು. 2014ರಲ್ಲಿ ಸಿದ್ಧಪಡಿಸಿರುವ ಸಮೀಕ್ಷಾ ವರದಿಯನ್ನು ಬಿಬಿಸಿ ಈಗ ಬಿಡುಗಡೆ ಮಾಡಿದೆ. ಬೆಂಗಳೂರು ಹೆಸರನ್ನು ಕೆಡಿಸಲು ಷಡ್ಯಂತ್ರ ಮಾಡಲಾಗಿದೆ ಎಂದು ಬಿಬಿಸಿ ವರದಿಯನ್ನು ಅಲ್ಲೆಗೆಳೆದರು.
ಕುಡಿಯುವ ನೀರಿನ ಅಭಾವ ಹೊಂದಿರುವ ಜಗತ್ತಿನ 11 ಮಹಾನಗರಗಳ ಸಮಸ್ಯೆಯನ್ನು ಬಿಬಿಸಿ ಆಧರಿಸಿ, ನೀರಿನ ಅಭಾವವಿರುವ ಮಹಾನಗರಗಳ ಬೆಂಗಳೂರು 2ನೇ ಸ್ಥಾನದಲ್ಲಿದೆ ಎಂದು ಬಿಬಿಸಿ ಸುದ್ದಿ ವಾಹಿನಿ ಭಾನುವಾರ ವರದಿ ಮಾಡಿತ್ತು.
ನೀರಿನ ಸೋರಿಕೆಯನ್ನು ಶೇ.49ರಿಂದ 39ರಷ್ಟು ಕಡಿಮೆಗೊಳಿಸಿದ್ದೇವೆ. ನಗರದಲ್ಲಿರುವ ಎಲ್ಲ ಕಟ್ಟಡಗಳಲ್ಲಿ ಎಸ್‌ಟಿಪಿ ಅಳವಡಿಸಲು ಕ್ರಮ ಕೈಗೊಂಡಿದ್ದೇವೆ. ನಗರದಿಂದ ಹೊರಬರುತ್ತಿರುವ ಸಂಪೂರ್ಣ ತ್ಯಾಜ್ಯ ನೀರನ್ನು ಸಂಸ್ಕರಿಸಲು ನಗರದಲ್ಲೆಡೆ ಎಸ್‌ಟಿಪಿ ಘಟಕ ಸ್ಥಾಪಿಸಲಾಗುತ್ತಿದೆ. ಅಂತರ್ಜಲ ಹೆಚ್ಚಿಸುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ತಿಂಗಳೊಳಗೆ ಎಲ್ಲ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ ಶರಾವತಿ ನದಿಯಿಂದ ನೀರು ತರುವ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಶರಾವತಿ ನದಿಗೆ ಅಣೆಕಟ್ಟು ಕಟ್ಟಿ ನೀರಿನ ಶುದ್ಧ ಕುಡಿಯುವ ನೀರನ್ನು ನಗರಕ್ಕೆ ತರಲು ಚಿಂತನೆ ನಡೆಸಲಾಗಿದೆ. ಎತ್ತಿನಹೊಳೆ ಯೋಜನೆಯಿಂದ ನಗರಕ್ಕೆ ಕುಡಿಯಲು ನೀರು ಹರಿಸಲು ಪೈಪ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ರಾಸಾಯನಿಕದಿಂದ ಬೆಂಕಿ ಕಾಣಿಸಿಕೊಂಡಿಲ್ಲ: ಬೆಳ್ಳಂದೂರು ಕೆರೆಯ ಕುರಿತು ಎನ್‌ಜಿಟಿ ವಿಚಾರಣೆ ನಡೆಸುವ ಎರಡು ದಿನಗಳ ಮುಂದೆ ಬೆಂಕಿ ಬೀಳುತ್ತಿದೆ. ಕೆರೆಗೆ ರಾಸಾಯನಿಕ ಕ್ರಿಯೆಯಿಂದ ಬೆಂಕಿ ಬೀಳುತ್ತಿಲ್ಲ. ಈ ಬಗ್ಗೆ ನನಗೆ ಅನುಮಾನವಿದೆ. 2020 ರೊಳಗೆ ಎಲ್ಲ ಕೆರೆಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ವರದಿಯಲ್ಲೇನಿದೆ?: 2014ನೇ ಸಾಲಿನಲ್ಲಿ ವಿಶ್ವದ 500 ನಗರಗಳಲ್ಲಿ ಬಿಬಿಸಿ ಸಮೀಕ್ಷೆ ನಡೆಸಿತ್ತು. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಿರುವ ನಗರ ಹೀಗಾಗಿ, ವೇಗವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯಿಂದಾಗಿ ನಗರಕ್ಕೆ ಕುಡಿಯುವ ನೀರು ಪೂರೈಸುವುದು ದೊಡ್ಡ ಸವಾಲು. ಒಳಚರಂಡಿ ಸೌಲಭ್ಯ ಕಲ್ಪಿಸುವುದೂ ಕಷ್ಟಕರ ಎಂದು ವರದಿ ನೀಡಿದೆ.
ನಮ್ಮಲ್ಲಿ ಸಾಕಷ್ಟು ಕುಡಿಯುವ ನೀರು ಲಭ್ಯವಿದೆ. ಸದ್ಯ ನಮಗೆ 1400 ಎಂಎಲ್‌ಡಿ ನೀರು ಹರಿದು ಬರುತ್ತಿದೆ. 5 ನೇ ಹಂತದಲ್ಲಿ 775 ಎಂಎಲ್‌ಡಿ ನೀರು ಸಿಗಲಿದೆ. ಸೋರಿಕೆಯಾಗುತ್ತಿದ್ದ ಶೇ.10ರಷ್ಟು ನೀರನ್ನು ಸಂರಕ್ಷಿಸಿ ನಗರಕ್ಕೆ ತರಲು ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ, ಬೆಂಗಳೂರಿಗೆ ಈ ಬೇಸಿಗೆ ಕಾಲಕ್ಕೆ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ. ನಗರದ ಜನರು ಆತಂಕಪಡುವ ಅಗತ್ಯವಿಲ್ಲ.
-ಕೆ.ಜೆ.ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ