ಪಾಕ್: ಭಯೋತ್ಪಾದಕ ವಿರೋಧಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ

Update: 2018-02-13 04:10 GMT

ಇಸ್ಲಾಮಾಬಾದ್, ಫೆ.13: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿಷೇಧ ಹೇರಿದ ಸಂಘಟನೆಗಳನ್ನು ಪಾಕಿಸ್ತಾನದಲ್ಲೂ ನಿಷೇಧಿಸುವ ಸಂಬಂಧ ಭಯೋತ್ಪಾದಕ ವಿರೋಧಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಅಧ್ಯಕ್ಷ ಮಮ್ನೂನ್ ಹುಸೈನ್ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದರಿಂದಾಗಿ ಜಮಾಅತ್ ಉದ್ ದವಾಹ್ (ಜೆಯುಡಿ) ಹಾಗೂ ಫಲಾಹ್ ಇ ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ಸಂಘಟನೆಗಳನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗುತ್ತದೆ.

ಕಳೆದ ವಾರ ಹೊರಡಿಸಿರುವ ಈ ಸುಗ್ರೀವಾಜ್ಞೆಯನ್ನು ಸೋಮವಾರ ಬಹಿರಂಗಪಡಿಸಲಾಗಿದೆ. ಪ್ರಸ್ತುತ ಇರುವ ಭಯೋತ್ಪಾದಕ ತಡೆ ಕಾಯ್ದೆ ಅನ್ವಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಟ್ಟಿ ಮಾಡಿದ ಉಗ್ರ ಸಂಘಟನೆಗಳನ್ನು ಪಾಕಿಸ್ತಾನದಲ್ಲೂ ಉಗ್ರ ಸಂಘಟನೆ ಎಂದು ಪರಿಗಣಿಸಬೇಕಿಲ್ಲ. ಕಾಯ್ದೆಯ ಸೆಕ್ಷನ್ 11ಬಿ ಮತ್ತು 11ಇಗೆ ತಿದ್ದುಪಡಿ ತರುವುದು ಸುಗ್ರೀವಾಜ್ಞೆಯ ಉದ್ದೇಶ.

ಪ್ಯಾರೀಸ್‌ನಲ್ಲಿ ನಡೆಯುವ ಉಗ್ರಗಾಮಿಗಳಿಗೆ ನೆರವು ನೀಡುವ ಕುರಿತ ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಇ) ಸಭೆ ಪ್ಯಾರಿಸ್‌ನಲ್ಲಿ ನಡೆಯುವ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ. ಲಷ್ಕರ್ ಇ ತೊಯ್ಬೆ, ಜೆಯುಡಿ, ಎಲ್‌ಇಟಿ ಸಂಸ್ಥಾಪಕ ಹಫೀಝ್ ಸಯೀದ್‌ಗೆ ಹಣಕಾಸು ನೆರವು ತಡೆಯಲು ಪಾಕಿಸ್ತಾನ ಯಾವ ಕ್ರಮಗಳನ್ನು ಕೈಗೊಂಡಿದೆ ಎಂಬ ಬಗ್ಗೆ ಈ ಸಭೆಯಲ್ಲಿ ಅವಲೋಕನ ನಡೆಯಲಿದೆ.

ಮುಂಬೈನಲ್ಲಿ 2008ರಲ್ಲಿ ನಡೆದ ದಾಳಿ ಬಳಿಕ ಅಮೆರಿಕ ಹಾಗೂ ವಿಶ್ವಸಂಸ್ಥೆ ಜೆಯುಡಿ ಮತ್ತು ಎಫ್‌ಐಎಫ್ ಮೇಲೆ ನಿಷೇಧ ಹೇರಿದರೂ ಪಾಕಿಸ್ತಾನ ನಿಷೇಧ ಹೇರಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News