×
Ad

ಭ್ರಷ್ಟಾಚಾರದ ದಾಖಲೆಯೊಂದಿಗೆ ಮೋದಿ ರಾಜ್ಯಕ್ಕೆ ಬರಲಿ: ಸಿದ್ದರಾಮಯ್ಯ ಸವಾಲು

Update: 2018-02-13 19:42 IST

ಬೆಂಗಳೂರು, ಫೆ.13: ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಬೆಂಗಳೂರಿಗೆ ಬಂದಾಗ ನಮ್ಮದು ಹತ್ತು ಪರ್ಸೆಂಟ್ ಸರಕಾರ ಎಂದು ಆರೋಪ ಮಾಡಿದ್ದರು. ಮುಂದಿನ ಬಾರಿ ಬರುವಾಗ ಅದಕ್ಕೆ ದಾಖಲೆ ತಂದು ಬಿಡುಗಡೆ ಮಾಡಲಿ ನೋಡೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಒಂದಲ್ಲ ನೂರು ಬಾರಿ ರಾಜ್ಯಕ್ಕೆ ಬರಲಿ. ಅದರಿಂದ ನಮಗೇನೂ ತೊಂದರೆ ಇಲ್ಲ. ಅವರದ್ದು ಒಂದು ರಾಜಕೀಯ ಪಕ್ಷ. ಹೀಗಾಗಿ ಬರುತ್ತಾರೆ ಎಂದರು. ನಮ್ಮ ಸರಕಾರದಲ್ಲಿ ಯಾವುದೆ ಕಮಿಷನ್ ವ್ಯವಹಾರ ಇಲ್ಲ. ಅಂತಹ ವ್ಯವಹಾರ ಏನಾದರೂ ನಡೆದಿದ್ದರೆ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ. ಆ ಸರಕಾರ ನೂರು ಪರ್ಸೆಂಟ್ ಕಮಿಷನ್ ಸರಕಾರವಾಗಿತ್ತು ಎಂದು ಸಿದ್ದರಾಮಯ್ಯ ಟೀಕಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾಂಸ ಸೇವಿಸಿ ದೇವಾಲಯಕ್ಕೆ ಹೋಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಆಹಾರ ಪದ್ಧತಿ ಎಂಬುದು ವೈಯಕ್ತಿಕ. ಅದು ಅವರವರಿಗೆ ಸೇರಿದ್ದು. ಇಷ್ಟಕ್ಕೂ ಮಾಂಸ ತಿಂದು ದೇವಾಲಯಕ್ಕೆ ಹೋದರು ಎಂಬುವುದು ಚರ್ಚೆಯ ವಿಷಯವೇ ಅಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಯಡಿಯೂರಪ್ಪಆರೋಪ ಮಾಡಿರುವಂತೆ ರಾಹುಲ್ ಗಾಂಧಿ ದೇವಾಲಯಕ್ಕೆ ಹೋಗುವ ಮೊದಲು ಮಾಂಸದ ಆಹಾರ ಸೇವನೆ ಮಾಡಿಯೂ ಇಲ್ಲ. ರಾಹುಲ್ ಗಾಂಧಿಯವರೇ ಇದನ್ನು ಸ್ಪಷ್ಟಪಡಿಸಿದ್ದಾರೆ. ಅವರ ಎರಡನೆ ಹಂತದ ರಾಜ್ಯ ಪ್ರವಾಸ ಮುಂಬೈ-ಕರ್ನಾಟಕ ಭಾಗದಲ್ಲಿ ಫೆ. 24ರಿಂದ ಮೂರು ದಿನ ನಡೆಯಲಿದೆ. ಅವರ ಪ್ರವಾಸದಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ಸೋಲುತ್ತದೆ ಎಂಬ ಬಿಜೆಪಿಯವರ ಹೇಳಿಕೆ ಸರಿಯಲ್ಲ. ಹಾಗಾದರೆ ಗುಜರಾತ್‌ನಲ್ಲಿ ನಮ್ಮ ಪಕ್ಷ ಗೆಲುವಿನ ಸಮೀಪ ಹೋಗಲು ಹೇಗೆ ಸಾಧ್ಯವಾಯಿತು? ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ನಮಗೆ ಇನ್ನೂ ಹೆಚ್ವಿನ ಬಲ ಬಂದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ದೇಶದ ಆರನೇ ಶ್ರೀಮಂತ ಮುಖ್ಯಮಂತ್ರಿ, 13 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದೇನೆ ಎಂದು ಸಮೀಕ್ಷೆಯೊಂದು ಹೇಳಿದೆ. ಅದು ನಮ್ಮ ಅವಿಭಕ್ತ ಕುಟುಂಬದ ಆಸ್ತಿಯ ಲೆಕ್ಕ. ಕಳೆದ ಚುನಾವಣೆಯಲ್ಲಿ ಅವಿಭಕ್ತ ಕುಟುಂಬದ ಒಟ್ಟು ಆಸ್ತಿಯನ್ನು ಘೋಷಿಸಿದ್ದೆ. ಅಣ್ಣ, ತಮ್ಮಂದಿರ ಎಲ್ಲ ಆಸ್ತಿಯ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಅವರು ತಿಳಿಸಿದರು. ನನ್ನ ಅಣ್ಣನ ನಿಧನದ ಬಳಿಕ ನಾನೇ ಮನೆಯ ಯಜಮಾನನಾಗಿದ್ದೆ. ಈಗ ಕುಟುಂಬದ ಆಸ್ತಿಯನ್ನು ವಿಭಜಿಸಲಾಗಿದೆ. ಜೊತೆಗೆ ಆರೂವರೆ ಕೋಟಿ ಜನರು ನನ್ನ ಆಸ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ನ್ಯಾಯಾಂಗ ನಿಂದನೆ ಅರ್ಜಿ ವಾಪಸ್
ಮಹಾದಾಯಿ ವಿಚಾರದಲ್ಲಿ ಗೋವಾ ಸರಕಾರ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದೆ. ನಾವು ಯಾವುದೇ ಕಾಮಗಾರಿ ನಡೆಸಿಲ್ಲ, ನ್ಯಾಯಾಂಗ ನಿಂದನೆ ಆಗಿಲ್ಲ ಎಂದು ನಾವು ಮೊದಲೇ ಹೇಳಿದ್ದರೂ ಕೇಳಲಿಲ್ಲ. ಈಗ ಅವರಿಗೆ ಗೊತ್ತಾಗಿ ಅವರಾಗಿಯೇ ನ್ಯಾಯಾಂಗ ನಿಂದನೆ ಅರ್ಜಿ ವಾಪಸ್ ಪಡೆದಿದ್ದಾರೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News