×
Ad

ಕುಮಾರಪರ್ವ ಐತಿಹಾಸಿಕ ಸಮಾವೇಶಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ; ಎಚ್‌ಡಿ ಕುಮಾರಸ್ವಾಮಿ

Update: 2018-02-13 19:52 IST

ಬೆಂಗಳೂರು, ಫೆ. 13: ಜೆಡಿಎಸ್ ಪಕ್ಷದ ‘ಕುಮಾರ ಪರ್ವ’ ಸಮಾವೇಶ ನಗರದ ಏರ್‌ಪೋರ್ಟ್ ರಸ್ತೆಯ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ಮೈದಾನದಲ್ಲಿ ಫೆ.17ರಂದು ನಡೆಯಲಿದೆ. ದೇಶದ ಇತಿಹಾಸದಲ್ಲೆ ಪ್ರಥಮ ಬಾರಿಗೆ 10ಲಕ್ಷ ಜನರನ್ನು ಒಂದೆಡೆ ಸೇರುವಂತೆ ಸುಮಾರು 150 ಎಕರೆ ಪ್ರದೇಶದಲ್ಲಿ ಬೃಹತ್ ಸಮಾವೇಶಕ್ಕೆ ವೇದಿಕೆ ಸಿಧ್ಧವಾಗುತ್ತಿದೆ.

ಮಂಗಳವಾರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವೇದಿಕೆಗೆ ಭೂಮಿಪೂಜೆ ನೆರವೇರಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದೇಶದ ಇತಿಹಸದಲ್ಲೇ ಐತಿಹಾಸಿಕ ಸಮಾವೇಶ. ನಮ್ಮ ಸಮಾವೇಶದಿಂದ ಬೆಂಗಳೂರು ನಗರ ನಿವಾಸಿಗಳಿಗೆ ಅನಾನುಕೂಲವಾಗಬಾರದೆಂಬ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ ಸಮಾವೇಶ ಏರ್ಪಡಿಸಲಾಗಿದೆ. ಅಂದಿನ ಸಮಾವೇಶದಲ್ಲಿ ಜೆಡಿಎಸ್ ರಾಷ್ಟೀಯ ಅಧ್ಯಕ್ಷ ದೇವೇಗೌಡ, ಬಿಎಸ್‌ಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಮಾಯಾವತಿ, ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸಮಾವೇಶಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 10ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಅದಕ್ಕೆ ತಕ್ಕಂತೆ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ತಯಾರಿ ನಡೆಸುತ್ತಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರಿಗೆ ಸುಮಾರು 10ರಿಂದ 15 ಸಾವಿರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 10 ಕಡೆಗಳಲ್ಲಿ ಫುಡ್‌ಕೋರ್ಟ್ ತೆರೆದು ಬೆಳಗ್ಗೆ 7.30ರಿಂದ ರಾತ್ರಿ 8ಗಂಟೆವರೆಗೆ ನಿರಂತರ ಅನ್ನದಾಸೋಹ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಜನತೆ-ಜನಪ್ರತಿನಿಧಿಗಳ ಮಧ್ಯೆ ಪರಸ್ಪರ ವಿಶ್ವಾಸ ಮೂಡಬೇಕೆಂಬ ನಿಟ್ಟಿನಲ್ಲಿ ಸಮಾವೇಶದಲ್ಲಿ ಜನಪ್ರತಿನಿಧಿಗಳಿಗೆ ಸಮಾಜದ ಹಿರಿಯ ಗೌರವಯುತ ವ್ಯಕ್ತಿ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಜನ ಪ್ರತಿನಿಧಿಗಳು ಜನಸ್ನೇಹಿಯಾಗಿ ಮಾಡುವುದು ಇದರ ಉದ್ದೇಶ ಎಂದರು.

ಜೆಡಿಎಸ್ ಪಕ್ಷದ ಪ್ರಚಾರಕ್ಕಾಗಿ ಸುಮಾರು 100 ಎಲ್ಸಿಡಿ ವಾಹನಗಳಿಗೆ ಅಂದು ಚಾಲನೆ ನೀಡಲಾಗುತ್ತದೆ. ರಾಜ್ಯಾದ್ಯಂತ ಈ ವಾಹನಗಳು ಸಂಚರಿಸಲಿವೆ. ಅರ್ಧ ಚುನಾವಣೆ ಫೆ.17ರಂದು ಮುಗಿಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ರಾಷ್ಟೀಯ ಪಕ್ಷದೊಂದಿಗೆ ಸಮ್ಮಿಶ್ರ ಸರಕಾರವಿಲ್ಲ: ಜೆಡಿಎಸ್ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸೇರಿ ಸಮ್ಮಿಶ್ರ ಸರಕಾರ ರಚಿಸಬಹುದು ಎಂಬ ಭಾವನೆ ಈ ಸಮಾವೇಶದ ಬಳಿಕ ದೂರವಾಗಲಿದೆ. ರಾಜ್ಯದಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಯಾವುದೇ ಭಾಗದ ಜನರ ಸಮಸ್ಯೆಗೆ ಕಾಲಾವಧಿ ನಿಗದಿ ಪಡಿಸಿ ಪರಿಹಾರ ಕೊಡುತ್ತೇವೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ವಿಚಾರ ಬಹಿರಂಗಪಡಿಸುತ್ತೇವೆ ಎಂದರು.

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದೆ, ಫೆ.17ರಂದು 135ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇನೆ. ಹಾಲಿ ಶಾಸಕರೆಲ್ಲರಿಗೂ ಟಿಕೆಟ್ ಕೊಡುವ ಆಶಯ ಇತ್ತು. ಆದರೆ, ಕೆಲ ಶಾಸಕರು ವೈಯಕ್ತಿಕ ಕಾರಣ ನೀಡಿ, ಬೇರೆಯವರಿಗೆ ಟಿಕೆಟ್ ನೀಡಿ ಎಂದು ಅವರೇ ಹೇಳುತ್ತಿದ್ದಾರೆ. ಆದರೂ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದೇನೆ ಎಂದು ತಿಳಿಸಿದರು.

ರಾಹುಲ್ ಗಾಂಧಿ, ಮೋದಿ ಅವರಿಗೆ ಉತ್ತರ ಕೊಡಲು ಸಮಾವೇಶ ಮಾಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಕಾರ್ಯಕ್ರಮ ನೋಡಿದ್ದೇನೆ. ಅಲ್ಲಿ ಎಷ್ಟು ಜನ ಸೇರಿದ್ದರೆಂಬುದು ಗೊತ್ತಿದೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News