ಕದಿರೇಶ್ ಹತ್ಯೆಯಲ್ಲಿ ಶಾಸಕ ಝಮೀರ್‌ಅಹ್ಮದ್ ಪಾತ್ರದ ಶಂಕೆ: ಎನ್.ರವಿಕುಮಾರ್
ಬೆಂಗಳೂರು, ಫೆ.13: ಬಿಜೆಪಿ ಕಾರ್ಯಕರ್ತ ಕದಿರೇಶ್ ಹತ್ಯೆ ಹಿಂದೆ ಚಾಮರಾಜಪೇಟೆ ಕ್ಷೇತ್ರದ ಶಾಸಕ ಝಮೀರ್‌ಅಹ್ಮದ್‌ಖಾನ್ ಕೈವಾಡದ ಶಂಕೆ ಇದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.
ಕದಿರೇಶ್ ಹತ್ಯೆ ಖಂಡಿಸಿ ಮಂಗಳವಾರ ನಗರದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ನಿರಂತರವಾಗಿ ಆರೆಸೆಸ್ಸ್, ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಯ ಹಿಂದೆ ಸಚಿವ ರೋಷನ್‌ಬೇಗ್ ಹೆಸರು ಕೇಳಿ ಬಂದಿದೆ ಎಂದು ಅವರು ಆರೋಪಿಸಿದರು.
ಅದೇ ರೀತಿ ಡಿವೈಎಸ್ಪಿ ಗಣಪತಿ ಹತ್ಯೆಯ ಹಿಂದೆ ಸಚಿವ ಕೆ.ಜೆ.ಜಾರ್ಜ್ ಪಾತ್ರದ ಬಗ್ಗೆ ಮಾಹಿತಿ ಇದ್ದು, ಈಗಾಗಲೇ ಸಿಬಿಐ ಅವರನ್ನು ಮೊದಲ ಆರೋಪಿಯನ್ನಾಗಿ ಪರಿಗಣಿಸಿದೆ. ಆದರೆ, ರಾಜ್ಯದ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಈ ಯಾವುದೇ ವಿಷಯಗಳನ್ನು ಯಾಕೆ ಪ್ರಸ್ತಾಪ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ, ಈ ಹಿಂದೆ ಜೆ.ಸಿ.ನಗರದ ದಲಿತ ಯುವಕ ಸಂತೋಷ್‌ನ ಹತ್ಯೆಯಾದಾಗ ಇದು ಹತ್ಯೆ ಮಾಡಿರುವುದಲ್ಲ, ಸ್ಕ್ರೂ ಡ್ರೈವರ್‌ನಿಂದ ಚುಚ್ಚಿದ್ದಾರೆ ಅಷ್ಟೇ ಎಂದು ಹಗುರವಾಗಿ ಹೇಳಿದ್ದರು. ಈಗ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ರಾಮಲಿಂಗಾರೆಡ್ಡಿ ಈ ಪ್ರಕರಣವನ್ನು ಮುಚ್ಚಿ ಹಾಕಲು ಹೊರಟಿದ್ದಾರೆ ಎಂದು ರವಿಕುಮಾರ್ ದೂರಿದರು.
ಹಿಂದಿನ ಗೃಹ ಸಚಿವರಾಗಿದ್ದ ಜಾರ್ಜ್, ಡಿವೈಎಸ್ಪಿ ಗಣಪತಿ ಹತ್ಯೆಯ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಅದು ಹತ್ಯೆಯಲ್ಲ, ಅವರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಸಿಓಡಿ ತನಿಖೆ ನಡೆಸಿ ಕ್ಲೀನ್‌ಚಿಟ್ ಪಡೆದಿದ್ದರು. ಆದರೆ, ಸಿಬಿಐ ತನಿಖೆಯಲ್ಲಿ ಗಣಪತಿಯ ಹತ್ಯೆಗೆ ಬಂದೂಕು ಬಳಕೆಯಾಗಿರುವ ಸಂದೇಹ ವ್ಯಕ್ತವಾಗಿದೆ. ಅವರ ಶವ ದೊರೆತ ಹೊಟೇಲ್ ರೂಮಿನಲ್ಲಿ ಗುಂಡು ಪತ್ತೆಯಾಗಿದ್ದು, ಸರಕಾರ ಈ ಪ್ರಕರಣವನ್ನೂ ಮುಚ್ಚಿ ಹಾಕಲು ಹೊರಟಿತ್ತು ಎಂದು ಅವರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್, ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ರಾಜ್ಯ ಬಿಜೆಪಿ ಸಹ ವಕ್ತಾರ ಅನ್ವರ್ ಮಾಣಿಪ್ಪಾಡಿ, ಬಿಬಿಎಂಪಿ ಮಾಜಿ ಸದಸ್ಯರಾದ ಬಿ.ವಿ.ಗಣೇಶ್, ಶಿವಕುಮಾರ್, ವಾಸುದೇವಮೂರ್ತಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.