ನೋಟು ಅಮಾನೀಕರಣ ಆರೆಸ್ಸೆಸ್ ಆಲೋಚನೆ: ರಾಹುಲ್ ಗಾಂಧಿ
ಕಲಬುರಗಿ, ಫೆ.13: ಗರಿಷ್ಠ ಮುಖಬೆಲೆಯ ನೋಟು ಅಮಾನೀಕರಣ ಪ್ರಧಾನಿ ಮೋದಿಯ ತೀರ್ಮಾನವಲ್ಲ, ಬದಲಾಗಿ ಇದು ಆರೆಸ್ಸೆಸ್ ಆಲೋಚನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆರೋಪಿಸಿದರು.
ನಗರದ ಹೈದರಾಬಾದ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸ್ಥಳೀಯ ವೃತ್ತಿಪರರು ಮತ್ತು ವ್ಯಾಪಾರ ಉದ್ದಿಮೆದಾರರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೋಟು ಅಮಾನೀಕರಣವು ಆರ್.ಬಿ.ಐನ ಸೂಚನೆ, ಹಣಕಾಸು ಇಲಾಖೆ ಅಧಿಕಾರಿಗಳ ಅಭಿಪ್ರಾಯ, ಅರುಣ್ ಜೇಟ್ಲಿಯ ಆಲೋಚನೆ ಅಥವಾ ಪ್ರಧಾನಿ ಮೋದಿಯ ಆಲೋಚನೆ ಅಲ್ಲ. ಬದಲಾಗಿ ಅದು ಆರೆಸ್ಸೆಸ್ ನ ಯೋಚನೆ ಎಂದು ಹೇಳಿದರು.
ಕೇಂದ್ರ ಸರಕಾರದ ಸಚಿವರು ಆರೆಸ್ಸೆಸ್ ಹೇಳಿದ ರೀತಿಯಲ್ಲಿ ಕೇಳುತ್ತಿದ್ದಾರೆ. ಆಡಳಿತದ ಎಲ್ಲಾ ಆಯಕಟ್ಟಿನ ಜಾಗಗಳಲ್ಲಿ ಆರೆಸ್ಸೆಸ್ ವ್ಯಕ್ತಿಗಳ ಪ್ರವೇಶವಾಗುತ್ತಿದೆ ಎಂದ ಅವರು, ಎಲ್ಲಾ ಕೇಂದ್ರ ಸಚಿವರುಗಳ ವಿಶೇಷ ಕರ್ತವ್ಯಾಧಿಕಾರಿಗಳಾಗಿ (ಒಎಸ್‌ಡಿ) ಆರೆಸ್ಸೆಸ್ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಜಿಎಸ್‌ಟಿಯಲ್ಲಿ ಏಕರೂಪ ತೆರಿಗೆ ಪದ್ದತಿ ಜಾರಿಯಿಂದ ನಾಗರಿಕರ ಮೇಲಿನ ಹೊರೆ ಕಡಿಮೆಯಾಗುವುದಲ್ಲದೆ, ವಿಶೇಷವಾಗಿ ವ್ಯಾಪಾರಿಗಳು, ಉದ್ದಿಮೆದಾರರು, ಸಣ್ಣ ಹಾಗೂ ಅತಿಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ. ಆದರೆ ಕೇಂದ್ರದ ಬಿಜೆಪಿ ಸರಕಾರ ಜಾರಿಗೊಳಿಸಿರುವ ಜಿಎಸ್‌ಟಿ ಗಬ್ಬರ್‌ಸಿಂಗ್ ಟ್ಯಾಕ್ಸ್ ರೀತಿ ಇದೆ ಎಂದು ವ್ಯಂಗ್ಯವಾಡಿದ ಅವರು, ಯಾವುದೇ ತೆರಿಗೆ ಪದ್ದತಿ ಜೀವನ ನಿರ್ವಹಣೆಗೆ ಸುಲಭವಾಗಿರಬೇಕು. ಆದರೆ ಪ್ರಧಾನಿ ಮೋದಿಯವರ ಜಿಎಸ್‌ಟಿಯಿಂದ ಜೀವನ ನಿರ್ವಹಣೆ ಕಠಿಣವಾಗಿದೆ ಎಂದು ನುಡಿದರು.
ಸಂವಾದದಲ್ಲಿ ಪಾಲ್ಗೊಂಡಿದ್ದ ಮಹಿಳಾ ವೈದ್ಯರೊಬ್ಬರು ವೈದ್ಯಕೀಯ ಮಸೂದೆ ಬಗ್ಗೆ ಪ್ರಸ್ತಾಪಿಸಿದಾಗ ರಾಹುಲ್‌ಗಾಂಧಿ, ರಾಜಕೀಯದಲ್ಲಿ ಹೆಚ್ಚು ಮಹಿಳೆಯರನ್ನು ನಾನು ನೋಡಲು ಬಯಸುತ್ತೇನೆ. ಮಹಿಳಾ ಮುಖ್ಯಮಂತ್ರಿಗಳು, ಮುಖಂಡರು ಹೆಚ್ಚು ಇರಬೇಕು ಎನ್ನುವುದು ನನ್ನ ಬಯಕೆ ಎಂದು ಅಭಿಪ್ರಾಯಪಟ್ಟರು.
ಸಂವಾದ ಕಾರ್ಯಕ್ರಮದಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಚಿವರ ಶರಣ ಪ್ರಕಾಶ ಪಾಟೀಲ್, ಪ್ರಿಯಾಂಕ ಖರ್ಗೆ ಮತ್ತಿತರರು ಉಪಸ್ಥಿತರಿದ್ದರು.
ಜಿ.ಎಸ್.ಟಿ ಮಾರ್ಪಾಡು
'ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಈಗಿನ ಜಿಎಸ್‌ಟಿ ತೆರಿಗೆ ಪದ್ದತಿಯನ್ನು ಬದಲಾಯಿಸಿ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು'
-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ