ಜಾತಿವಾದಿಗಳಿಗೆ ಜಾತಿಯೇ ಐಡೆಂಟಿಟಿ: ಸಿ.ಬಸವಲಿಂಗಯ್ಯ

Update: 2018-02-13 15:05 GMT

ಬೆಂಗಳೂರು, ಫೆ.13: ಹನ್ನೆರಡನೆ ಶತಮಾನದಲ್ಲಿ ಬಸವಣ್ಣ ಹಾಗೂ ಬಸವಣ್ಣನ ಸಮಕಾಲೀನರು ಜಾತಿ ವಿನಾಶಕ್ಕಾಗಿ ಹೋರಾಡಿದರೆ, ಪ್ರಸ್ತುತ ದಿನಗಳಲ್ಲಿ ಜಾತಿವಾದಿಗಳು ಜಾತಿಯನ್ನೇ ಐಡೆಂಟಿಟಿ ಮಾಡಿಕೊಂಡಿದ್ದಾರೆ ಎಂದು ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಕಿಡಿಕಾರಿದರು.

ಮಂಗಳವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ದಲಿತ ವಚನಕಾರರ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉತ್ತರ ಭಾರತದಿಂದ ಬೌದ್ಧ ಧಮ್ಮ, ಸಿಖ್ ಧರ್ಮ ಇನ್ನಿತರ ಧರ್ಮಗಳು ದಕ್ಷಿಣ ಭಾರತದ ಕಡೆಗೆ ಬಂದರೆ, ಉತ್ತರ ಕರ್ನಾಟಕದಿಂದ ಬಸವಧರ್ಮ ಅಥವಾ ಶಿವಶರಣದ ಧರ್ಮವು ಜಗತ್ತಿನ ಎಲ್ಲ ಮೂಲೆಗಳಿಗೂ ತಲುಪಿ, ಜಾತಿ ವಿನಾಶಕ್ಕೆ ಕಿಡಿಯನ್ನು ಹಚ್ಚಿತು ಎಂದು ಹೇಳಿದರು.

ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿದ ಮೇಲೆ ಆ ಅನುಭವ ಮಂಟಪಕ್ಕೆ ಯಾವುದೆ ಜಾತಿಯ ತಾರತಮ್ಯವಿಲ್ಲದೆ ಎಲ್ಲ ಜಾತಿಯವರು ಹಾಗೂ ಎಲ್ಲ ಜಾತಿಯ ಹೆಣ್ಣು ಮಕ್ಕಳು ಒಂದೆ ವೇದಿಕೆಯ ಮೇಲೆ ಕುಳಿತು ಚರ್ಚಿಸಿ ಗಂಭೀರ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು ಎಂದು ತಿಳಿಸಿದರು. ಕರ್ನಾಟಕ ಸರಕಾರ ಕಲೆ, ಸಾಹಿತ್ಯ, ಸಂಸ್ಕೃತಿಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತದೆ. ಆದರೆ, ದೇಶದ ಇತರೆ ರಾಜ್ಯಗಳ ಸರಕಾರಗಳು ಕಲೆ, ಸಾಹಿತ್ಯ, ಸಂಸ್ಕೃತಿಗೆ ಇಷ್ಟೊಂದು ಹಣವನ್ನು ಖರ್ಚು ಮಾಡುವುದಿಲ್ಲ. ಹಾಗೆಯೇ ಕರ್ನಾಟಕ ಸರಕಾರವು ಕಲಾವಿದರ ಪ್ರೋತ್ಸಾಹಕ್ಕಾಗಿ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತದೆ ಎಂದು ಹೇಳಿದರು.

ಬೆಂವಿವಿ ಕನ್ನಡ ಉಪನ್ಯಾಸಕ ಡಾ.ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ, ನೋವುಗಳನ್ನು ಉಂಡವರು ಕ್ರಾಂತಿಗಳನ್ನು ಮಾಡಲು ಮುಂದಾಗುತ್ತಾರೆ. ಈ ಸಾಲಿಗೆ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಉರಿಲಿಂಗಪೆದ್ದಿ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ ಅವರು ಸೇರಿಕೊಂಡು ಸಮಾಜವನ್ನು ತಿದ್ದುವ ನೂರಾರು ವಚನಗಳನ್ನು ರಚಿಸಿದರು. ಇವರ ಕ್ರಾಂತಿಯನ್ನು ಕಂಡ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳು ಇವರಿಗೆ ಬೆನ್ನುಲುಬಾಗಿ ನಿಂತು ಪ್ರೋತ್ಸಾಹಿಸಿದರು. ಹಾಗೂ ತಾವೇ ಖುದ್ದಾಗಿ ಕ್ರಾಂತಿಯ ನೇತೃತ್ವವನ್ನು ವಹಿಸಿದರು. ರಾಜ ಮಹಾರಾಜರುಗಳ ಹೆಸರುಗಳು ಶಾಶ್ವತವಾಗಿ ಉಳಿಯುವುದು ಅಪರೂಪ. ಆದರೆ, ಕಾಂತ್ರಿಗಳು ಎಂದೆಂದಿಗೂ ನೆಲೆಸಿರುತ್ತವೆ ಹಾಗೂ ಅವು ಸ್ಫೂರ್ತಿಯ ಸೆಲೆಗಳಾಗಿರುತ್ತವೆ ಎಂದು ತಿಳಿಸಿದರು.

ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ ಮಾತನಾಡಿ, ಬಸವಣ್ಣನವರು ಜಾತಿ ವಿನಾಶಕ್ಕಾಗಿ ಹೋರಾಡಿ ಈ ನೆಲದಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರಕಾರಿ ಕಲಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣಪ್ಪ, ರಂಗಕರ್ಮಿ ನಾಗರಾಜಮೂರ್ತಿ, ಅಶೆಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News