ಪ್ರವಾಸಿಗರ ಆಕರ್ಷಣೆಗೆ ಹೊಸ ಪ್ರವಾಸೋದ್ಯಮ ನೀತಿ: ಉಪ ನಿರ್ದೇಶಕ ವಿ.ಎಸ್.ಅನಿಲ್

Update: 2018-02-13 15:11 GMT

ಬೆಂಗಳೂರು, ಫೆ. 13: ದೇವರ ಸ್ವಂತ ನಾಡು ಎಂಬ ಖ್ಯಾತಿಗೆ ಪಾತ್ರವಾಗಿರುವ ಕೇರಳ ರಾಜ್ಯವು ಪ್ರವಾಸಿಗರನ್ನು ಆಕರ್ಷಿಸಲು ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಿದೆ ಎಂದು ಕೇರಳ ಪ್ರವಾಸೋದ್ಯಮ ಇಲಾಖೆ ಮಾರುಕಟ್ಟೆ ವಿಭಾಗದ ಉಪ ನಿರ್ದೇಶಕ ವಿ.ಎಸ್.ಅನಿಲ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಪಾಲುದಾರರ ಸಭೆ ಬಳಿಕ ಮಾತನಾಡಿದ ಅವರು, ‘ಐದು ವರ್ಷಗಳಲ್ಲಿ ವಿದೇಶಿ ಪ್ರವಾಸಿಗರ ಪ್ರಮಾಣ ಶೇ.100ರಷ್ಟು ಹೆಚ್ಚಳ ಮತ್ತು ಸ್ಥಳೀಯ ಪ್ರವಾಸಿಗರಲ್ಲಿ ಶೇ.50ರಷ್ಟು ಹೆಚ್ಚಳದ ಗುರಿ ಹೊಂದಿದ್ದು, ಪ್ರವಾಸೋದ್ಯಮ ನಿಯಂತ್ರಣ ಪ್ರಾಧಿಕಾರವನ್ನು ರೂಪಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಪ್ರವಾಸಿಗರ ಹೆಚ್ಚಳವನ್ನು ದಾಖಲಿಸಿದೆ. ಒಟ್ಟು ಆದಾಯದಲ್ಲೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.11.12ರಷ್ಟು ಹೆಚ್ಚಳವಾಗಿದೆ ಎಂದ ಅವರು, ವಿದೇಶಿ ಪ್ರವಾಸಿಗರು ಕೇರಳದ ಸಾಂಸ್ಕೃತಿಕ ಪರಂಪರೆಯ ಅನುಭವ ಪಡೆಯಲು ಬರುತ್ತಿದ್ದಾರೆ.
ಆದರೆ, ನಮ್ಮ ಸಂಸ್ಕೃತಿ ವೇದಿಕೆಯ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನು ಪ್ರದರ್ಶಿಸಲು ಬಯಸುತ್ತಿದ್ದೇವೆ. ಇದು ನಮ್ಮ ಜೀವನಶೈಲಿಯಲ್ಲಿ ಆಳವಾಗಿ ಬೇರುಬಿಟ್ಟಿದೆ. ಪ್ರವಾಸಿಗರಿಗೆ ಕೇರಳದ ಶ್ರೀಮಂತಿಕೆಯನ್ನು ಅನುಭವಿಸಲು ಗಮನಾರ್ಹ ಹೆಜ್ಜೆಗಳನ್ನು ಇರಿಸುತ್ತಿದೆ.
ಪ್ರವಾಸೋದ್ಯಮದ ಮೊದಲ ಹಂತವಾಗಿ ಮಾರ್ಚ್ 12ರಂದು ಕೇರಳ ಬ್ಲಾಗ್ ಎಕ್ಸ್‌ಪ್ರೆಸ್ ಆರಂಭಗೊಳ್ಳಲಿದೆ. ಕೇರಳವನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಉದ್ದಿಮೆಗಳು, ವಾಣಿಜ್ಯ ವೃತ್ತಿಪರರನ್ನು ಒಗ್ಗೂಡಿಸಲು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅನಿಲ್ ತಿಳಿಸಿದರು.

‘ಕರ್ನಾಟಕ ರಾಜ್ಯದಿಂದ ಕೇರಳಕ್ಕೆ ಅತ್ಯಂತ ಹೆಚ್ಚು ಮಂದಿ ಪ್ರವಾಸಿಗರ ಬರುತ್ತಿದ್ದು, ವಾರ್ಷಿಕ ಶೇ.20ರಷ್ಟು ಹೆಚ್ಚಳವಾಗುತ್ತಿದೆ. ಇಂದಿನ ಪಾಲುದಾರಿಕೆ ಸಭೆಗೆ 50ಕ್ಕೂ ಹೆಚ್ಚು ಮಂದಿ ಟ್ರಾವೆಲ್ಸ್ ಏಜೆಂಟ್ಸ್ ಮತ್ತು 300ಕ್ಕೂ ಅಧಿಕ ಮಂದಿ ಪ್ರವಾಸಿಗರು ಪಾಲ್ಗೊಂಡಿದ್ದಾರೆ’
-ವಿ.ಎಸ್.ಅನಿಲ್, ಕೇರಳ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News