ರಾಜ್ಯಾದ್ಯಂತ ಸಂಭ್ರಮದ ಶಿವರಾತ್ರಿ ಆಚರಣೆ
ಬೆಂಗಳೂರು, ಫೆ.13: ರಾಜ್ಯಾದ್ಯಂತ ಮಹಾಶಿವರಾತ್ರಿಯನ್ನು ಭಕ್ತರು ಸಂಭ್ರಮ ಹಾಗೂ ಸಡಗರದ ಜೊತೆಗೆ, ಎಲ್ಲಾ ಶಿವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ, ಭಜನೆ, ಪ್ರಾರ್ಥನೆ ಸಲ್ಲಿಸುವ ಮೂಲಕ ಭಕ್ತ ಸಮೂಹ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಿದರು.
ಕೋಲಾರದ ಕೋಟಿಲಿಂಗೇಶ್ವರ, ಮೈಸೂರಿನ ತ್ರಿನೇಶ್ವರ ಸ್ವಾಮಿ ದೇವಾಲಯ, ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರಗಳನ್ನು ಮಾಡುವ ಮೂಲಕ ಭಕ್ತಿಯನ್ನು ಸಲ್ಲಿಸಲಾಗಿತ್ತು.
ಮುಂಜಾನೆಯಿಂದಲೇ ಶಿವನ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನ ಪಡೆಯಲು ಬೆಳಗ್ಗೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬರುತ್ತಿದ್ದವು. ಅಲ್ಲದೆ, ಶಿವನಿಗೆ ಬಿಲ್ವ ಪತ್ರೆ, ಕೆಂಪು ದಾಸವಾಳ, ತುಳಸಿ, ನಿಂಬೆ ಹೂಗಳಿಂದ ಅಭಿಷೇಕ ಮಾಡಲಾಯಿತು. ಹಾಗೂ ರುದ್ರಾಭಿಷೇಕ, ಪಂಚಾಮೃತ ಅಭಿಷೇಕದ ನಂತರ ಕೊಳಗ ಧಾರಣೆ ಮಾಡಲಾಯಿತು.
ಬೆಂಗಳೂರಿನ ಗವಿಪುರಂನಲ್ಲಿರುವ ಪುರಾತನ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನಿಗೆ ವಜ್ರಾಲಂಕಾರ ಮತ್ತು ಮಹಾಭಿಷೇಕ ಮಾಡಲಾಯಿತು. ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಹಾಗೂ ಕಣಗಿಲೆ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ 6 ಗಂಟೆಯಿಂದಲೇ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಆಗಮಿಸಿ ದರ್ಶನ ಪಡೆದುಕೊಂಡರು.
ಅಲ್ಲದೆ, ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ಶಿವಾಲಯ, ನಂದಿಯ ಬಾಯಿಂದ ಸುರಿಯುವ ಜಲಧಾರೆಯಿಂದ ಶಿವನಿಗೆ ನಿತ್ಯ ಅಭಿಷೇಕವಾಗುವ ದಕ್ಷಿಣಾಭಿಮುಖ ನಂದೀತೀರ್ಥ ಶಿವಾಲಯ, ಚಾಮರಾಜಪೇಟೆಯ ರಾಮೇಶ್ವರ ಗುಡಿ, ಕಲಾಸಿಪಾಳ್ಯದ ಕೋಟೆ ಜಲಕಂಠೇಶ್ವರ ದೇವಸ್ಥಾನ, ಹಲಸೂರು ಸೋಮೇಶ್ವರ ದೇವಸ್ಥಾನ, ಪಾತಾಳ ಪಂಚನಾಗೇಂದ್ರಸ್ವಾಮಿ, ನಾಗರಬಾವಿಯ ಕೈಲಾಸಗಿರಿ ದೇವಾಲಯ ಸೇರಿದಂತೆ ಎಲ್ಲಾ ಶಿವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.
ಐತಿಹಾಸಿಕ ಪ್ರಸಿದ್ಧಿಯನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಭೋಗನಂದೀಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಭಕ್ತಿ ಭಾವದಿಂದ ತುಪ್ಪದ ದೀಪ ಹಚ್ಚಿ ಶಿವನ ದರ್ಶನ ಪಡೆದರು. ಹಬ್ಬದ ಅಂಗವಾಗಿ ಎರಡು ದಿನಗಳ ಕಾಲ ನಡೆಯುವ ಜಾತ್ರೆಗೆ ಅದ್ಧೂರಿ ಚಾಲನೆ ನೀಡಿದ್ದು, ಭಕ್ತರ ದಂಡು ಸಾಗರೋಪಾದಿಯಲ್ಲಿ ಹರಿದು ಬಂದಿತ್ತು.
ವಿಜಯಪುರ ಹೊರ ವಲಯದ ಶಿವಗಿರಿಯಲ್ಲಿರುವ ಕಾಶಿ ವಿಶ್ವನಾಥನಿಗೆ ರುದ್ರಾಭಿಷೇಕ, ಶಿವಭಜನೆ ಸೇರಿದಂತೆ ಇಡೀ ದಿನ ವಿಶೇಷ ಪೂಜೆ ನೆರವೇರಿಸಲಾಯಿತು. ಅಪಾರ ಭಕ್ತರು ಶಿವಗಿರಿಯತ್ತ ತೆರಳಿ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಶಿವಗಿರಿಗೆ ಸಾರಿಗೆ ಸಂಸ್ಥೆ ಹೆಚ್ಚಿನ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿತ್ತು. ಮಧ್ಯಾಹ್ನ ಸಿದ್ಧೇಶ್ವರ ಗುಡಿಯಿಂದ ಶಿವಗಿರಿವರೆಗೂ ನಂದಿಧ್ವಜಗಳ ಮೆರವಣಿಗೆ ಜನಪದ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿತ್ತು.