ಬೆಂಗಳೂರು: ಫೆ.15ರಿಂದ ಔಷಧ ಉದ್ಯಮ ಮತ್ತು ವೈದ್ಯಕೀಯ ಸಾಧನಗಳ ಜಾಗತಿಕ ಸಮ್ಮೇಳನ

Update: 2018-02-13 16:09 GMT

ಬೆಂಗಳೂರು, ಫೆ.13: ಭಾರತದ ಅತಿ ದೊಡ್ಡ ಔಷಧ ಉದ್ಯಮ ಮತ್ತು ವೈದ್ಯಕೀಯ ಸಾಧನಗಳ ಜಾಗತಿಕ ಸಮ್ಮೇಳನವು ‘ಮುಂದಿನ ತಲೆಮಾರಿನತ್ತ ಔಷಧೋತ್ಪನ್ನಗಳು’ ಎಂಬ ಘೋಷವಾಕ್ಯದಡಿಯಲ್ಲಿ ಫೆ.15ರಿಂದ ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ.

ಕೇಂದ್ರ ಔಷಧೀಯ ಇಲಾಖೆ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ, ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ(ಎಫ್‌ಐಸಿಸಿಐ) ಸಹಯೋಗದಲ್ಲಿ ಬೆಂಗಳೂರಿನಲ್ಲಿ ಫೆ.15 ರಿಂದ 17ರವರೆಗೆ ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಸಾಧನ-2018 ಸಮಾವೇಶವನ್ನು ಆಯೋಜಿಸಿದೆ.

ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಸಾಧನ-2018ರಲ್ಲಿ ಔಷಧ ಉತ್ಪಾದನೆ ಮತ್ತು ವೈದ್ಯಕೀಯ ಉಪಕರಣಗಳ ಉತ್ಪಾದನಾ ಕಂಪನಿಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಜತೆ ಕೇಂದ್ರ ಸಚಿವ ಅನಂತಕುಮಾರ್, ಸರಕಾರದ ನೀತಿ ಮತ್ತು ಉದ್ಯಮ ಎದುರಿಸುತ್ತಿರುವ ಸವಾಲುಗಳ ಕುರಿತು ದುಂಡುಮೇಜಿನ ಸಭೆ ನಡೆಸಲಿದ್ದಾರೆ.

ಈ ಸಮ್ಮೇಳನ ಫಾರ್ಮ ಮತ್ತು ವೈದ್ಯಕೀಯ ಉಪಕರಣಗಳ ವಲಯಕ್ಕೆ ಸಂಬಂಧಿಸಿದವರೆಲ್ಲರನ್ನು ಒಂದೇ ವೇದಿಕೆಗೆ ತರಲಿದೆ. ಹೊರ ದೇಶಗಳ 50 ಪ್ರತಿನಿಧಿಗಳು ಸೇರಿದಂತೆ ನೂರಾರು ಪ್ರತಿನಿಧಿಗಳು ಭಾಗವಹಿಸಲಿದ್ದು, ವಸ್ತುಪ್ರದರ್ಶನದಲ್ಲಿ 50 ನವೋದ್ಯಮಗಳು ಸೇರಿದಂತೆ, 300 ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಉದ್ಯಮದ 90ಕ್ಕೂ ಅಧಿಕ ನಾಯಕರು ಹಲವು ವಿಷಯಗಳ ಬಗ್ಗೆ ಭಾಷಣ ಮಾಡಲಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಔಷಧ ಮತ್ತು ಸಾಧನಗಳ ಉತ್ಪಾದಕರು ಹಾಗೂ ನಿಯಂತ್ರಕರು ಸಮ್ಮೇಳನದಲ್ಲಿ ಭಾರತೀಯ ಕಂಪನಿಗಳ ಜತೆ ಭಾಗವಹಿಸಲಿದ್ದಾರೆ. ಅತ್ಯಂತ ಮಹತ್ವದ ಈ ಸಮ್ಮೇಳನದಲ್ಲಿ ಸಿಐಎಸ್ ಮತ್ತು ಬಿಮ್‌ಸ್ಟೆಕ್ ರಾಷ್ಟ್ರಗಳ ಸಚಿವರ ನಿಯೋವು ಭಾಗವಹಿಸಲಿದೆ.
ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಸಾಧನಗಳ ಸಮ್ಮೇಳನದ ಪ್ರಮುಖಾಂಶವೆಂದರೆ, ವಿಶ್ವ ಆರೋಗ್ಯ ಸಂಸ್ಥೆ ಈ ಸಮ್ಮೇಳನದಲ್ಲಿ ನಿಯಂತ್ರಣ ವ್ಯವಸ್ಥೆ ಬಲವರ್ಧನೆ-ಪೂರ್ವಾರ್ಹತೆ ಕುರಿತಂತೆ ಕಾರ್ಯಾಗಾರವನ್ನು ಆಯೋಜಿಸಿರುವುದು. ಇದಲ್ಲದೆ ನ್ಯಾಸ್ಕಾಂ ಔಷಧೋತ್ಪನ್ನ, ವೈದ್ಯಕೀಯ ಉಪಕರಣ ಮತ್ತು ಆರೋಗ್ಯ ರಕ್ಷಣೆ ಉದ್ಯಮದಲ್ಲಿ ಡಿಜಿಟಲ್ ಪರಿವರ್ತನಾ ತಂತ್ರಜ್ಞಾನದ ಮೂಲಕ ಆವಿಷ್ಕಾರ ಕುರಿತ ಚರ್ಚೆಯನ್ನೂ ಆಯೋಜಿಸಿದೆ.

ಇದೇ ಸಂದರ್ಭದಲ್ಲಿ ಭಾರತೀಯ ಫಾರ್ಮ ಮತ್ತು ಭಾರತೀಯ ವೈದ್ಯಕೀಯ ಉಪಕರಣಗಳ ಪ್ರಶಸ್ತಿಯನ್ನೂ ಪ್ರಕಟಿಸಲಾಗುವುದು. ಔಷಧೋತ್ಪನ್ನ ಮತ್ತು ವೈದ್ಯಕೀಯ ಉಪಕರಣಗಳ ವಲಯದಲ್ಲಿ ಶ್ರೇಷ್ಠ ಸಾಧನೆ ಮತ್ತು ಹೊಸ ಆವಿಷ್ಕಾರಗಳನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುವುದು.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮೂರು ದಿನಗಳ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಬಂದರು ಖಾತೆ ರಾಜ್ಯ ಸಚಿವ ಮನ್ಸುಖ್ ಎಲ್.ಮಾಂಡವೀಯ ಸೇರಿದಂತೆ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಜೀವಶಾಸ್ತ್ರದ ಅಭಿವೃದ್ಧಿಯಲ್ಲಿ ನಿಯಂತ್ರಣ ಅಗತ್ಯತೆಗಳು, ಅವಕಾಶಗಳು ಮತ್ತು ಸವಾಲುಗಳು, ಸ್ವಯಂ ರಕ್ಷಣೆಯಲ್ಲಿ ಉದಯಿಸುತ್ತಿರುವ ಜಾಗತಿಕ ಟ್ರೆಂಡ್, ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಒಟಿಸಿ ನಿಯಂತ್ರಣ ಒಪ್ಪಂದದ ಪ್ರಸ್ತುತತೆ, ಮೇಕ್ ಇನ್ ಇಂಡಿಯಾ ಅಭಿಯಾನ ಮತ್ತಿತರ ಅಂಶಗಳನ್ನು ಚರ್ಚೆಗೆ ಆಯ್ದುಕೊಳ್ಳಲಾಗಿದೆ.

‘ಮುಂದಿನ ತಲೆಮಾರಿನತ್ತ ಔಷಧೋತ್ಪನ್ನಗಳು’ ಎನ್ನುವ ಘೋಷವಾಕ್ಯದೊಂದಿಗೆ ನಡೆಸುತ್ತಿರುವ ಸಮ್ಮೇಳನ ಭವಿಷ್ಯದಲ್ಲಿ ಔಷಧ ಉತ್ಪಾದನೆ ಅಭಿವೃದ್ಧಿ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ. ಜೀವಶಾಸ್ತ್ರಜ್ಞರು ಒಟ್ಟಾರೆ ಭಾರತದಲ್ಲಿನ ಔಷಧೋತ್ಪನ್ನ ವಲಯದ ಪ್ರಗತಿಯನ್ನು ವಿಶ್ಲೇಷಿಸಲಿದ್ದಾರೆ. ಮೂರನೇ ಆವೃತ್ತಿಯ ಈ ಸಮ್ಮೇಳನ ಔಷಧೋತ್ಪನ್ನ ವಲಯಕ್ಕೆ ಸಂಬಂಧಿಸಿದ ಎಲ್ಲರಿಗೂ ಅನುಕೂಲ ಒದಗಿಸುವ ಜತೆಗೆ ಮುಂದಿನ ದಿನಗಳಲ್ಲಿ ಔಷಧೋತ್ಪನ್ನ ವಲಯದಲ್ಲಿ ಏಷ್ಯಾದಲ್ಲಿ ನಡೆಯಲಿರುವ ಅತಿ ದೊಡ್ಡ ಸಮಾವೇಶವಾಗಿ ರೂಪುಗೊಳ್ಳಲಿದೆ.
-ಅನಂತ್‌ಕುಮಾರ್, ಕೇಂದ್ರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News