ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಗೆ 12 ರನ್ ಗಳ ಜಯ

Update: 2018-02-13 18:58 GMT

ವೆಲ್ಲಿಂಗ್ಟನ್, ಫೆ.13: ಇಂಗ್ಲೆಂಡ್ ವಿರುದ್ಧ ಟ್ವೆಂಟಿ -20ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ 12 ರನ್‌ಗಳ ರೋಚಕ ಜಯ ಗಳಿಸಿದೆ.

ವೆಲ್ಲಿಂಗ್ಟನ್ ರಿಜನಲ್ ಸ್ಟೇಡಿಯಂನಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಗೆಲುವಿಗೆ 197 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 184 ರನ್ ಗಳಿಸಿದೆ.

ಟ್ರೆಂಟ್ ಬೌಲ್ಟ್(46ಕ್ಕೆ 2), ಸಾಂಟ್ನೆರ್ (29ಕ್ಕೆ 2), ಐ.ಸೋಧಿ (49ಕ್ಕೆ 2), ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಗೆಲುವಿನ ದಡ ಸೇರುವಲ್ಲಿ ವಿಫಲಗೊಂಡಿದೆ.

ಇಂಗ್ಲೆಂಡ್ ತಂಡದ ಮಲಾನ್(59) ಅರ್ಧಶತಕ ,ಅಲೆಕ್ಸ್ ಹೇಲ್ಸ್ 47 ರನ್ ನರವಿನಲ್ಲಿ ಇಂಗ್ಲೆಂಡ್ ಹೋರಾಟ ನಡೆಸಿದರೂ ಗುರಿ ಮುಟ್ಟಲಿಲ್ಲ.

ಇಂಗ್ಲೆಂಡ್ 14 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್‌ನ್ನು ಕಳೆದುಕೊಂಡಿತ್ತು.

 ಜೇಸನ್ ರಾಯ್(8) ಔಟಾದರು. ಬಳಿಕ ಎರಡನೇ ವಿಕೆಟ್‌ಗೆ ಅಲೆಕ್ಸ್ ಹೇಲ್ಸ್ ಮತ್ತು ಮಲಾನ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು. ಹೇಲ್ಸ್ ಅವರು ಸೋಧಿ ಎಸೆತದಲ್ಲಿ ಗ್ರಾಂಡ್‌ಹೊಮೆ ಅವರಿಗೆ ಕ್ಯಾಚ್ ನೀಡುವುದರೊಂದಿಗೆ ಅರ್ಧಶತಕ ವಂಚಿತಗೊಂಡರು.

ಜೇಮ್ಸ್ ವಿನ್ಸ್ (10) ಮತ್ತು ನಾಯಕ ಜೋ ಬಟ್ಲರ್(2) ಬೇಗನೆ ನಿರ್ಗಮಿಸಿದರು.ಬಿಲ್ಲಿಂಗ್ (12) ಮತ್ತು ವಿಲ್ಲಿ(21) ಎರಡಂಕೆಯ ಕೊಡುಗೆ ನೀಡಿದರು.

ತಂಡದ ಸ್ಕೋರ್‌ನ್ನು 158ಕ್ಕೆ ಏರಿಸಿ ಮಲಾನ್ ಔಟಾದರು. ಕ್ರಿಸ್ ಜೋರ್ಡನ್(6), ಪ್ಲಂಕೆಟ್(0)ಎಂಎ ವುಡ್ (ಔಟಾಗದೆ 5) ಅವರ ವೈಫಲ್ಯದಿಂದಾಗಿ ತಂಡ ಗೆಲುವಿನ ಅವಕಾಶ ಕಳೆದುಕೊಂಡಿತು.

ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ನ್ಯೂಝಿಲೆಂಡ್‌ನ್ನು ಬ್ಯಾಟಿಂಗ್‌ಗೆ ಇಳಿಸಿತ್ತು. ನ್ಯೂಝಿಲೆಂಡ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 196 ರನ್ ಗಳಿಸಿತ್ತು.

  ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್(65) ಅರ್ಧಶತಕ ಸಿಡಿಸಿದರು. ಮುನ್ರೊ 11 ರನ್ ಗಳಿಸಿದರು. ಅವರು ಔಟಾದ ಬಳಿಕ ಮಾರ್ಟಿನ್ ಗಪ್ಟಿಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ (72) ಅವರು 82 ರನ್ ಸೇರಿಸಿದರು. ಗಪ್ಟಿಲ್ 58 ನಿಮಿಷಗಳ ಬ್ಯಾಟಿಂಗ್‌ನಲ್ಲಿ 40 ಎಸೆತಗಳನ್ನು ಎದುರಿಸಿದರು. 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 65 ರನ್ ಗಳಿಸಿದರು. ನಾಯಕ ವಿಲಿಯಮ್ಸನ್ 65 ನಿಮಿಷಗಳ ಬ್ಯಾಟಿಂಗ್‌ನಲ್ಲಿ 46 ಎಸೆತಗಳನ್ನು ಎದುರಿಸಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 72 ರನ್ ಕೊಡುಗೆ ನೀಡಿದರು.

ಸಂಕ್ಷಿಪ್ತ ಸ್ಕೋರ್ ವಿವರ

►ನ್ಯೂಝಿಲೆಂಡ್ 20 ಓವರ್‌ಗಳಲ್ಲಿ 196/5(ಗಪ್ಟಿಲ್ 65, ವಿಲಿಯಮ್ಸನ್ 72, ; ವುಡ್ 51ಕ್ಕೆ 2, ರಶೀದ್ 36ಕ್ಕೆ 2).

►ಇಂಗ್ಲೆಂಡ್ 20 ಓವರ್‌ಗಳಲ್ಲಿ 184/9(ಹೇಲ್ಸ್ 47, ಮಲಾನ್ 59; ಸ್ಯಾಂಟ್ನರ್ 29ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News