ಮಣಿಶಂಕರ್ ಅಯ್ಯರ್ ಹೇಳಿಕೆಯಿಂದ ದೂರ ಸರಿದ ಕಾಂಗ್ರೆಸ್

Update: 2018-02-14 13:16 GMT

ಹೊಸದಿಲ್ಲಿ, ಫೆ.14: ಪಾಕಿಸ್ತಾನದಲ್ಲಿ ಗಳಿಸಿದ ಪ್ರೀತಿಗಿಂತ ಹೆಚ್ಚು ಭಾರತದಲ್ಲಿ ದ್ವೇಷವನ್ನು ಗಳಿಸಿದ್ದೇನೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯಿಂದ ಪಕ್ಷವು ದೂರವುಳಿಯಲು ನಿರ್ಧರಿಸಿದೆ.

ಅಯ್ಯರ್ ಅವರನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದ್ದು ಪಕ್ಷದ ಪರವಾಗಿ ಮಾತನಾಡುವ ಹಕ್ಕು ಅವರಿಗಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ತಿಳಿಸಿದ್ದಾರೆ.

ಮಂಗಳವಾರದಂದು ಪಾಕಿಸ್ತಾನದ ಕರಾಚಿಯಲ್ಲಿ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಿದ ಅಯ್ಯರ್, ಪಾಕಿಸ್ತಾನದ ಜನರು ತನ್ನ ಮೇಲೆ ತೋರಿಸುವ ಪ್ರೀತಿಗಿಂತ ಹೆಚ್ಚಿನ ದ್ವೇಷವನ್ನು ಭಾರತದಲ್ಲಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು. ತಾನು ಶಾಂತಿಯ ಬಗ್ಗೆ ಮಾತನಾಡುವುದರಿಂದಾಗಿ ಪಾಕಿಸ್ತಾನದ ಜನರು ತನ್ನನ್ನು ಶ್ಲಾಘಿಸುತ್ತಾರೆ ಎಂದು ಅಯ್ಯರ್ ತಿಳಿಸಿದ್ದರು.

ನನಗೆ ಅಪರಿಚಿತರಾಗಿರುವ ಸಾವಿರಾರು ಜನರು ನನ್ನನ್ನು ಅಪ್ಪಿಕೊಳ್ಳುತ್ತಾರೆ, ಶುಭಾಶಯ ಹೇಳುತ್ತಾರೆ. ಹಾಗಾಗಿ ಇಲ್ಲಿಗೆ ಬರಲು ನನಗೆ ಸಂತೋಷವಾಗುತ್ತದೆ ಎಂದು ಅಯ್ಯರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂಬ ಪಾಕಿಸ್ತಾನ ಸರಕಾರದ ಇಂಗಿತವನ್ನು ಭಾರತ ಸರಕಾರವು ಹೊಂದಿಲ್ಲ ಎಂಬುದಾಗಿ ಅಯ್ಯರ್ ಹೇಳಿರುವುದಾಗಿ ಪಾಕಿಸ್ತಾನಿ ಸುದ್ದಿವಾಹಿನಿ ಜಿಯೋ ನ್ಯೂಸ್ ತಿಳಿಸಿದೆ.

ಗುಜರಾತ್ ವಿಧಾನಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ಅಯ್ಯರ್ ಅವರನ್ನು ಉಚ್ಛಾಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News