ಕಂಚು ಗೆದ್ದ ಕೆನಡಾ ಅಥ್ಲೀಟ್‌ಗೆ ಜೀವಬೆದರಿಕೆ

Update: 2018-02-14 18:32 GMT

ಪಿಯೊಂಗ್‌ಚೊಂಗ್, ಫೆ.14: ಕೆನಡಾದ ಶಾರ್ಟ್ ಟ್ರಾಕ್ ಸ್ಕೇಟರ್ ಕಿಮ್ ಬೌಟಿನ್ಸ್ ಒಲಿಂಪಿಕ್ಸ್‌ನಲ್ಲಿ ಚೊಚ್ಚಲ ಪದಕ ಗೆಲ್ಲುವ ಕನಸು ಈಡೇರಿಸಿಕೊಂಡರು. ಆದರೆ, ದಕ್ಷಿಣ ಕೊರಿಯಾದ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡುವ ಮೂಲಕ ಅವರ ಉತ್ಸಾಹವನ್ನು ಕುಗ್ಗಿಸಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ 500 ಮೀ. ಫೈನಲ್ ಸ್ಪರ್ಧೆಗೆ ಅಡ್ಡಿಪಡಿಸಿದ ಕಾರಣ ದಕ್ಷಿಣ ಕೊರಿಯಾದ ಅಥ್ಲೀಟ್ ಚೋ ಮಿನ್-ಜಿಯೊಂಗ್ ಅನರ್ಹಗೊಂಡರು. 23ರ ಹರೆಯದ ಬೌಟಿನ್ಸ್ ಮೂರನೇ ಸ್ಥಾನ ಪಡೆದು ಕಂಚು ಗೆದ್ದುಕೊಂಡರು. ಆದರೆ, ಬೌಟಿನ್ಸ್‌ರ ಚೊಚ್ಚಲ ಒಲಿಂಪಿಕ್ಸ್ ಪದಕ ಜಯಿಸಿದ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಬೌಟಿನ್ಸ್‌ರ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಮ್‌ಗೆ ಲಗ್ಗೆ ಇಟ್ಟ ಕೊರಿಯಾದ ಅಭಿಮಾನಿಗಳು ನಿಂದನೆಗಳ ಸುರಿಮಳೆಗೈದರು. ಈ ಹಿನ್ನೆಲೆಯಲ್ಲಿ ಬೌಟಿನ್ಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯನ್ನು ಬ್ಲಾಕ್ ಮಾಡಿದರು. ಸುದ್ದಿಪತ್ರಿಕೆಯೊಂದರ ಪ್ರಕಾರ ಬೌಟಿನ್ಸ್‌ರ ಇನ್‌ಸ್ಟಾಗ್ರಾಮ್‌ಖಾತೆಯಲ್ಲಿ ಕನಿಷ್ಠ 10,000 ಕಾಮೆಂಟ್‌ಗಳು ಬಂದಿದ್ದು ಇದರಲ್ಲಿ ಹೆಚ್ಚಿನವು ನಿಂದನೆಗಳಾಗಿದ್ದವು.

‘ಕೊಳಕು ಪದಕ ಗೆದ್ದಿರುವುದಕ್ಕೆ ಧನ್ಯವಾದಗಳು’ ಎಂದು ಓರ್ವ ಕೊರಿಯಾ ಅಭಿಮಾನಿ ಟ್ವೀಟ್ ಮಾಡಿದರೆ, ಮತ್ತೊಬ್ಬ, ಪದಕಕ್ಕಾಗಿ ಮೋಸ ಮಾಡಬೇಕೆಂದು ನಿಮ್ಮ ತಂದೆ ಹೇಳಿಕೊಟ್ಟಿದ್ದಾರಾ? ಎಂದು ಪ್ರಶ್ನೆ ಮಾಡಿದ್ದಾನೆೆ.

‘‘ಸಾಮಾಜಿಕ ಜಾಲತಾಣವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ತಮಗೆ ಅನಿಸಿದ್ದನ್ನು ಹೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ, ಎಲ್ಲರೂ ಅಥ್ಲೀಟ್‌ಗಳಿಗೆ ಗೌರವ ನೀಡಬೇಕು. ಅವರ ಸಾಧನೆಯನ್ನು ಬೆಂಬಲಿಸಬೇಕು’’ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ವಕ್ತಾರ ಮಾರ್ಕ್ ಆಡಮ್ಸ್ ಹೇಳಿದ್ದಾರೆ.

ವಿದೇಶಿ ಸ್ಪೀಡ್ ಸ್ಕೇಟರ್ ಮೇಲೆ ದಕ್ಷಿಣ ಕೊರಿಯಾದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. 2014ರ ಸೋಚಿ ಗೇಮ್ಸ್‌ನಲ್ಲಿ ಬ್ರಿಟನ್‌ನ ಎಲಿಸ್ ಕ್ರಿಸ್ಟಿ ಇದೇ ರೀತಿಯ ಪರಿಸ್ಥಿತಿ ಎದುರಿಸಿದ್ದರು. ಕ್ರಿಸ್ಟಿ ದಕ್ಷಿಣ ಕೊರಿಯಾದ ಸ್ಕೇಟರ್ ಪಾರ್ಕ್ ಸಿಯೊಂಗ್ ಹಿಗೆ ಢಿಕ್ಕಿ ಹೊಡೆದಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು.

ಆತಿಥೇಯ ದಕ್ಷಿಣ ಕೊರಿಯಾ ಚಳಿಗಾಲದ ಕ್ರೀಡೆ ಶಾರ್ಟ್ -ಟ್ರಾಕ್ ಸ್ಪೀಡ್ ಸ್ಕೇಟಿಂಗ್‌ನಲ್ಲಿ ಫೇವರಿಟ್ ಆಗಿದ್ದು, 55 ವಿಂಟರ್ ಒಲಿಂಪಿಕ್ಸ್ ಪದಕಗಳ ಪೈಕಿ 43ನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News