ಭಾರತದ ಅಗ್ರ ಸ್ಥಾನ ಭದ್ರ

Update: 2018-02-14 18:36 GMT

ಹೊಸದಿಲ್ಲಿ, ಫೆ.14: ಪೋರ್ಟ್ ಎಲಿಝಬೆತ್‌ನಲ್ಲಿ ಮಂಗಳವಾರ ನಡೆದ 5ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ 73 ರನ್‌ಗಳಿಂದ ಜಯ ಸಾಧಿಸಿರುವ ಟೀಮ್ ಇಂಡಿಯಾ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಡರ್ಬನ್(6 ವಿಕೆಟ್), ಸೆಂಚೂರಿಯನ್(9 ವಿಕೆಟ್) ಹಾಗೂ ಕೇಪ್‌ಟೌನ್‌ನಲ್ಲಿ(124 ರನ್)ಜಯ ಸಾಧಿಸಿ ಹ್ಯಾಟ್ರಿಕ್ ಸಾಧಿಸಿದ್ದ ಭಾರತ ಶನಿವಾರ ನಡೆದ ಮಳೆಬಾಧಿತ ನಾಲ್ಕನೇ ಏಕದಿನ ಪಂದ್ಯದಲ್ಲಿ ಸೋತಿತ್ತು. ಮಂಗಳವಾರ ನಡೆದ ಸರಣಿ ನಿರ್ಣಾಯಕ 5ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ತಿರುಗೇಟು ನೀಡಿದ ಭಾರತ ದಕ್ಷಿಣ ಆಫ್ರಿಕದಲ್ಲಿ ಮೊತ್ತ ಮೊದಲ ಬಾರಿ ದ್ವಿಪಕ್ಷೀಯ ಏಕದಿನ ಸರಣಿ ಜಯಿಸಿತು.

ಈ ಗೆಲುವಿನೊಂದಿಗೆ ಭಾರತ 122 ಅಂಕ ಗಳಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಗಟ್ಟಿಪಡಿಸಿಕೊಂಡಿದೆ. ದಕ್ಷಿಣ ಆಫ್ರಿಕ 121 ರಿಂದ 118 ಅಂಕಕ್ಕೆ ಕುಸಿದಿದೆ. ಭಾರತ ತಂಡ ದಕ್ಷಿಣ ಆಫ್ರಿಕ ವಿರುದ್ಧ ಸರಣಿಗೆ ಮೊದಲು 119 ಅಂಕ ಗಳಿಸಿತ್ತು. ದಕ್ಷಿಣ ಆಫ್ರಿಕಗಿಂತ 2 ಅಂಕ ಹಿಂದಿತ್ತು. ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯಲು ಕನಿಷ್ಠ ನಾಲ್ಕು ಪಂದ್ಯಗಳನ್ನು ಗೆಲ್ಲಬೇಕಾಗಿತ್ತು.

  1992ರಲ್ಲಿ ಮೊದಲ ಬಾರಿ ದಕ್ಷಿಣ ಆಫ್ರಿಕಕ್ಕೆ ಕ್ರಿಕೆಟ್ ಪ್ರವಾಸ ಕೈಗೊಂಡ ಬಳಿಕ ಭಾರತ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಸರಣಿ ಜಯಿಸಿಲ್ಲ. 2006ರಲ್ಲಿ ಏಕೈಕ ಟ್ವೆಂಟಿ-20 ಪಂದ್ಯವನ್ನು ಜಯಿಸಿತ್ತು. ‘ರೈನ್‌ಬೊ’ದೇಶದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಏಕದಿನ ಸರಣಿಯನ್ನು ಜಯಿಸಿದ ಸಾಧನೆ ಮಾಡಿದೆ. ಮುಹಮ್ಮದ್ ಅಝರುದ್ದೀನ್, ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್ ಹಾಗೂ ಎಂ.ಎಸ್. ಧೋನಿ ನೇತೃತ್ವದಲ್ಲಿ ಮಾಡದ ಸಾಧನೆಯನ್ನು ಕೊಹ್ಲಿ ಬಳಗ ಮಾಡಿ ತೋರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News