ನೀವು ಅತ್ಯಾಚಾರಕ್ಕೆ 6,500 ರೂ.ಬೆಲೆ ಕಟ್ಟುತ್ತೀರಾ?

Update: 2018-02-15 14:40 GMT

 ಹೊಸದಿಲ್ಲಿ,ಫೆ.15: ‘‘ನೀವು ಅತ್ಯಾಚಾರಕ್ಕೆ 6,500 ರೂ.ಬೆಲೆ ಕಟ್ಟುತ್ತೀರಾ?’’ ಇದು ಗುರುವಾರ ಆಘಾತಗೊಂಡ ಸ್ಥಿತಿಯಲ್ಲಿದ್ದ ಸರ್ವೋಚ್ಚ ನ್ಯಾಯಾಲಯವು ಮಧ್ಯಪ್ರದೇಶ ಸರಕಾರಕ್ಕೆ ಕೇಳಿದ ಪ್ರಶ್ನೆ. ಸರಕಾರದ ಧೋರಣೆಯಿಂದ ಕೆಂಡಾಮಂಡಲಗೊಂಡಿದ್ದ ಅದು, ಲೈಂಗಿಕ ದೌರ್ಜನ್ಯಗಳ ಬಲಿಪಶುಗಳಿಗೆ ಈ ಜುಜುಬಿ ಮೊತ್ತವನ್ನು ನೀಡುವ ಮೂಲಕ ನೀವು ದಾನಧರ್ಮದ ಕಾರ್ಯ ಮಾಡುತ್ತೀದ್ದೀರಾ ಎಂದೂ ಪ್ರಶ್ನಿಸಿತು.

ಕೇಂದ್ರದಿಂದ ನಿರ್ಭಯಾ ನಿಧಿ ಯೋಜನೆಯಡಿ ಗರಿಷ್ಠ ಮೊತ್ತವನ್ನು ಪಡೆದುಕೊಂಡಿ ರುವ ರಾಜ್ಯಗಳಲ್ಲೊಂದಾಗಿರುವ ಮಧ್ಯಪ್ರದೇಶವು ಅತ್ಯಾಚಾರ ಸಂತ್ರಸ್ತೆಯರಿಗೆ ತಲಾ ಕೇವಲ 6,000-6,500 ರೂ.ಗಳ ಪರಿಹಾರವನ್ನು ವಿತರಿಸುತ್ತಿರುವುದು ತನಗೆ ಆಘಾತವನ್ನುಂಟು ಮಾಡಿದೆ ಎಂದು ನ್ಯಾಯಾಲಯವು ಹೇಳಿತು.

ಮಧ್ಯಪ್ರದೇಶ ಸರಕಾರವು ಸಲ್ಲಿಸಿದ ಪ್ರಮಾಣಪತ್ರವನ್ನು ಪರಿಶೀಲಿಸುತ್ತಿದ್ದ ನ್ಯಾಯಮೂರ್ತಿಗಳಾದ ಮದನ ಬಿ.ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನೊಳ ಗೊಂಡ ಪೀಠವು, ನಿಮ್ಮ ಮತ್ತು ನಿಮ್ಮ ಪ್ರಮಾಣಪತ್ರದ ಮೇರೆಗೆ ಸರಾಸರಿಯಾಗಿ ಪ್ರತಿ ಅತ್ಯಾಚಾರ ಸಂತ್ರಸ್ತೆಗೆ 6,000 ರೂ.ಗಳನ್ನು ವಿತರಿಸುತ್ತಿದ್ದೀರಿ. ನೀವೇನು ದಾನ ನೀಡುತ್ತಿದ್ದೀರಾ? ನೀವು ಹಾಗೆ ಮಾಡಲು ಹೇಗೆ ಸಾಧ್ಯ? ಅತ್ಯಾಚಾರಕ್ಕೆ ನೀವು 6,500 ರೂ.ಗಳ ಬೆಲೆ ಕಟ್ಟುತ್ತಿದ್ದೀರಾ ಎಂದು ಕಿಡಿಕಾರಿತು.

ಮಧ್ಯಪ್ರದೇಶದ ಈ ಅಂಕಿಸಂಖ್ಯೆಗಳು ಅದ್ಭುತವಾಗಿವೆ. ರಾಜ್ಯದಲ್ಲಿ 1,951 ಅತ್ಯಾಚಾರ ಸಂತ್ರಸ್ತೆಯರಿದ್ದಾರೆ. ಅವರಿಗೆ 6,000-6,500 ರೂ.ಪರಿಹಾರವನ್ನು ನೀಡುವುದು ಸಮಂಜಸವೇ? ನೀವು ಸಂವೇದನೆ ಎನ್ನುವುದನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೀರಿ ಎಂದು ಸರಕಾರವನ್ನು ಝಾಡಿಸಿದ ಪೀಠವು, ನಿರ್ಭಯಾ ನಿಧಿಯಿಂದ ಗರಿಷ್ಠ ಮೊತ್ತವನ್ನು ಪಡೆಯುತ್ತಿದ್ದರೂ 1,951 ಅತ್ಯಾಚಾರ ಸಂತ್ರಸ್ತೆಯರಿಗೆ ಕೇವಲ ಸುಮಾರು ಒಂದು ಕೋ.ರೂ.ಗಳನ್ನು ವಿತರಿಸಿರುವುದು ಅತ್ಯಂತ ಆಘಾತವ ನ್ನುಂಟು ಮಾಡಿದೆ ಎಂದು ಹೇಳಿತು.

ನಿರ್ಭಯಾ ನಿಧಿಯ ವಿವರಗಳ ಪ್ರಮಾಣಪತ್ರವನ್ನು ಸಲ್ಲಿಸದ್ದಕ್ಕಾಗಿ ಹರ್ಯಾಣ ಸರಕಾರವೂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಯಿತು.

ನಿರ್ಭಯಾ ನಿಧಿ ಯೋಜನೆಯಡಿ ಸ್ವೀಕರಿಸಿದ ಮೊತ್ತ, ಅತ್ಯಾಚಾರ ಸಂತ್ರಸ್ತೆಯರ ಸಂಖ್ಯೆ ಮತ್ತು ಅವರಿಗೆ ವಿತರಿಸಲಾಗಿರುವ ಹಣದ ಕುರಿತು ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶ ನೀಡಿತ್ತು. 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಇನ್ನೂ ತಮ್ಮ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಿದೆ.

ಪ್ರಮಾಣಪತ್ರವನ್ನು ಸಲ್ಲಿಸುವುದಾಗಿ ಹರ್ಯಾಣದ ವಕೀಲರು ತಿಳಿಸಿದಾಗ, ನೀವು (ಸರಕಾರ)ಪ್ರಮಾಣಪತ್ರವನ್ನು ಸಲ್ಲಿಸದಿರುವುದು ನಿಮ್ಮ ರಾಜ್ಯದಲ್ಲಿಯ ಮಹಿಳೆಯರ ಸುರಕ್ಷತೆಯ ಬಗ್ಗೆ ನಿಮ್ಮ ಧೋರಣೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಪೀಠವು ಕುಟುಕಿತು.

ಪ್ರಮಾಣಪತ್ರಗಳನ್ನು ಸಲ್ಲಿಸಲು ನೀವು ನಿಮ್ಮದೇ ಸಮಯವನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ರಾಜ್ಯದಲ್ಲಿಯ ಮಹಿಳೆಯರ ಬಗ್ಗೆ ನಮಗೆ ಕಾಳಜಿಯಿಲ್ಲ ಎನ್ನುವುದನ್ನು ಅವರಿಗೆ ತಿಳಿಸಿ ಎಂದು ಹೇಳುವ ಮೂಲಕ ಸರ್ವೋಚ್ಚ ನ್ಯಾಯಾಲಯವು ಪ್ರಮಾಣಪತ್ರಗಳನ್ನು ಸಲ್ಲಿಸದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಬೆವರನ್ನಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News