ಪುತ್ರ ಮೃತಪಟ್ಟ 2 ವರ್ಷದ ಬಳಿಕ ಅಜ್ಜಿಯಾದ ಪುಣೆಯ ಮಹಿಳೆ

Update: 2018-02-15 14:43 GMT

ಪುಣೆ, ಫೆ. 15: ಎರಡು ವರ್ಷಗಳ ಹಿಂದೆ ಪುತ್ರ ಕ್ಯಾನ್ಸರ್‌ನಿಂದ ತೀರಿಕೊಂಡಾಗ ಪುಣೆ ಮೂಲದ ಮಹಿಳೆಯ ಜಗತ್ತು ನಿಶ್ಚಲವಾಗಿತ್ತು. ಆದರೆ, ಅವರ ಸಂತೋಷಕ್ಕೆ ಈಗ ಮೇರೆ ಇಲ್ಲದಾಗಿದೆ. ಪುತ್ರನ ಸಂಗ್ರಹಿಸಿಟ್ಟಿದ್ದ ವೀರ್ಯ ಬಳಿಸಿ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳು ಪಡೆಯುವ ಮೂಲಕ ಅವರು ಈಗ ಅಜ್ಜಿಯಾಗಿದ್ದಾರೆ.

ಮಹಿಳೆಯ ಪುತ್ರ ಪ್ರಥಮೇಶ್ ಪಾಟೀಲ್ ಜರ್ಮನಿಯಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದರು. ಸಂಗ್ರಹಿಸಿಟ್ಟಿದ್ದ ಅವರ ವೀರ್ಯದಿಂದ ಪುಣೆಯ ಸಹ್ಯಾದ್ರಿ ಆಸ್ಪತ್ರೆಯ ವೈದ್ಯರು ಐವಿಎಫ್ ಮೂಲಕ ಅವಳಿ ಶಿಶು ಪಡೆಯಲು ನೆರವಾಗಿದ್ದಾರೆ. ಭ್ರೂಣವನ್ನು ಬಾಡಿಗೆ ತಾಯಿಯ ಗರ್ಭಕ್ಕೆ ವರ್ಗಾಯಿಸಲಾಗಿತ್ತು. ಆಕೆ ಸೋಮವಾರ ಹೆಣ್ಣು ಮತ್ತು ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ.

ರಾಜಶ್ರೀ ಪಾಟಿಲ್ ಅವರ ಪುತ್ರ ಪ್ರಥಮೇಶ್ ಪಾಟೀಲ್ ಜರ್ಮನಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈ ಸಂದರ್ಭ ಅವರಿಗೆ ಬ್ರೈನ್ ಟ್ಯೂಮರ್ ಆಗಿರುವುದು ಪತ್ತೆಯಾಗಿತ್ತು.

''ಈ ಸುದ್ದಿ ನಮ್ಮ ಕುಟುಂಬವನ್ನು ಆಘಾತಕ್ಕೀಡು ಮಾಡಿತ್ತು. ಜರ್ಮನಿಯ ಆರೋಗ್ಯ ತಜ್ಞರು ಪ್ರಥಮೇಶ್‌ಗೆ ಕಿಮೋತೆರಪಿ ಹಾಗೂ ರೇಡಿಯೇಶನ್ ಆರಂಭಿಸುವಂತೆ ಸಲಹೆ ನೀಡಿದರು. ಅಲ್ಲದೆ ಚಿಕಿತ್ಸೆಯ ಸಂದರ್ಭ ದೇಹದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇರುವುದರಿಂದ ವೀರ್ಯ ಸಂಗ್ರಹಿಸಿ ಇರಿಸುವಂತೆ ಸಲಹೆ ನೀಡಿದ್ದರು.'' ಎಂದು ರಾಜಶ್ರೀ ಹೇಳಿದ್ದಾರೆ.

2013ರಲ್ಲಿ ಪ್ರಥಮೇಶ್ ಅವರನ್ನು ಭಾರತಕ್ಕೆ ಕರೆ ತರಲಾಗಿತ್ತು. ಆದರೆ, ಅವರ ಆರೋಗ್ಯದಲ್ಲಿ ಆರಂಭದಲ್ಲಿ ಸುಧಾರಣೆ ಕಂಡು ಬಂದರೂ ಅನಂತರ ಹದಗೆಟ್ಟಿತ್ತು. 2016 ಸೆಪ್ಟಂಬರ್‌ನಲ್ಲಿ ಅವರು ಮೃತಪಟ್ಟಿದ್ದರು.

ಪುತ್ರ ಮೃತಪಟ್ಟ ಬಳಿಕ ಪುತ್ರನನ್ನು ಮರಳಿ ಪಡೆಯಬೇಕು ಎಂಬ ಬಯಕೆ ರಾಜಶ್ರೀ ಅವರಲ್ಲಿ ಹುಟ್ಟಿತ್ತು. ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿರುವ ವೀರ್ಯ ಬ್ಯಾಂಕ್ ಅನ್ನು ಸಂಪರ್ಕಿಸಿ ಅಲ್ಲಿಂದ ಭಾರತಕ್ಕೆ ವೀರ್ಯ ತರಿಸಿಕೊಂಡಿದ್ದರು. ಅನಂತರ ಸಹ್ಯಾದ್ರಿ ಆಸ್ಪತ್ರೆಯ ಐವಿಎಫ್ ಸಂಪರ್ಕಿಸಿ ಪುತ್ರನ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆಯುವಲ್ಲಿ ರಾಜಶ್ರೀ ಪಾಟೀಲ್ ಯಶಸ್ವಿಯಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News