ನೇಪಾಳ ಪ್ರಧಾನಿಯಾಗಿ ಕೆ.ಪಿ. ಒಲಿ ಅಧಿಕಾರ ಸ್ವೀಕಾರ

Update: 2018-02-15 16:28 GMT

ಕಠ್ಮಂಡು (ನೇಪಾಳ), ಫೆ. 15: ಸಿಪಿಎನ್-ಯುಎಂಎಲ್ ಪಕ್ಷದ ಅಧ್ಯಕ್ಷ ಕೆ.ಪಿ. ಶರ್ಮ ಒಲಿ ಇಂದು ಎರಡನೆ ಬಾರಿಗೆ ನೇಪಾಳದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

ನೇಪಾಳದಲ್ಲಿ ನಡೆದ ಐತಿಹಾಸಿಕ ಸಂಸದೀಯ ಮತ್ತು ಸ್ಥಳೀಯ ಚುನಾವಣೆಗಳಲ್ಲಿ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ಸನ್ನು ಎಡಪಕ್ಷಗಳ ಮೈತ್ರಿಕೂಟ ಧೂಳೀಪಟಗೈದ 2 ತಿಂಗಳ ಬಳಿಕ, 65 ವರ್ಷದ ಒಲಿಗೆ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ದೇಶದ 41ನೆ ಪ್ರಧಾನಿಯಾಗಿ ಪ್ರಮಾಣವಚನ ಬೋಧಿಸಿದರು.

ಚೀನಾ ಪರ ಒಲವು ಹೊಂದಿರುವ ಒಲಿ 2015 ಅಕ್ಟೋಬರ್ 11ರಿಂದ 2016 ಆಗಸ್ಟ್ 3ರವರೆಗೆ ಮೊದಲ ಬಾರಿಗೆ ನೇಪಾಳದ ಪ್ರಧಾನಿಯಾಗಿದ್ದರು.

ಒಲಿಯ ಪ್ರಧಾನಿ ಅಭ್ಯರ್ಥಿತ್ವವನ್ನು ಯುಸಿಪಿಎನ್-ಮಾವೋವಾದಿ, ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ನೇಪಾಳ ಮತ್ತು ಮಾದೇಸಿ ರೈಟ್ಸ್ ಫೋರಂ ಡೆಮಾಕ್ರಟಿಕ್ ಹಾಗೂ ಇತರ 13 ಸಣ್ಣ ಪಕ್ಷಗಳು ಬೆಂಬಲಿಸಿವೆ.

ಇದಕ್ಕೂ ಮೊದಲು, ಮಾಜಿ ಪ್ರಧಾನಿ ಶೇರ್ ಬಹಾದುರ್ ದೇವುಬ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು ಹಾಗೂ ಅಧ್ಯಕ್ಷೆಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

2 ತಿಂಗಳ ವಿಳಂಬ

ನೇಪಾಳದಲ್ಲಿ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಸಂಸದೀಯ ಚುನಾವಣೆಗಳು ನಡೆದಿದ್ದವು. ಆದರೆ, ಸಂಸತ್ತಿನ ಮೇಲ್ಮನೆಯ ಚುನಾವಣೆ ನಡೆಯುವವರೆಗೆ ಅಂತಿಮ ಚುನಾವಣಾ ಫಲಿತಾಂಶವನ್ನು ಘೋಷಿಸಲು ಚುನಾವಣಾ ಆಯೋಗ ನಿರಾಕರಿಸಿತ್ತು. ಹಾಗಾಗಿ, ನೂತನ ಸರಕಾರ ರಚನೆ ಕಾರ್ಯ ವಿಳಂಬವಾಗಿದೆ. ಮೇಲ್ಮನೆ ಚುನಾವಣೆ ಕಳೆದ ವಾರ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News