ಏಷ್ಯನ್ ಗೇಮ್ಸ್ ಟೆಸ್ಟ್ ಇವೆಂಟ್: ಭಾರತದ ಬಾಕ್ಸರ್ ಗಳಿಗೆ ಐದು ಚಿನ್ನದ ಪದಕ

Update: 2018-02-15 18:20 GMT

ಜಕಾರ್ತ, ಫೆ.15: ಏಷ್ಯನ್ ಗೇಮ್ಸ್ ಟೆಸ್ಟ್ ಇವೆಂಟ್‌ನಲ್ಲಿ ಐದು ಚಿನ್ನ, 1 ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಜಯಿಸಿರುವ ಭಾರತೀಯ ಬಾಕ್ಸರ್‌ಗಳು ಭಾರೀ ಪಂಚ್ ನೀಡಿದ್ದಾರೆ.

ಕಳೆದ ವರ್ಷ ರಾಷ್ಟ್ರೀಯ ಬಾಕ್ಸಿಂಗ್ ಪ್ರಶಸ್ತಿ ಜಯಿಸಿದ್ದ ಇಂಡಿಯಾ ಓಪನ್ ಚಾಂಪಿಯನ್ ಮನೀಶ್ ಕೌಶಿಕ್(60ಕೆಜಿ) ಸತತ ಎರಡನೇ ಬಾರಿ ಚಿನ್ನ ಜಯಿಸಿ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು.

ಮಹಿಳೆಯರ ವಿಭಾಗದಲ್ಲಿ ಪವಿತ್ರಾ(60ಕೆಜಿ) ಚಿನ್ನದ ಪದಕ ಜಯಿಸಿದ್ದಾರೆ. ಮೂರು ಬಾರಿಯ ಕಿಂಗ್ಸ್ ಕಪ್ ಚಾಂಪಿಯನ್ ಕೆ.ಶ್ಯಾಮ್ ಕುಮಾರ್(49ಕೆಜಿ), ಶೇಖ್ ಸಲ್ಮಾನ್ ಅನ್ವರ್(52ಕೆಜಿ) ಹಾಗೂ ಆಶೀಷ್(64ಕೆಜಿ) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.

ಥಾಯ್ಲೆಂಡ್‌ನ ನಿಲಾವನ್‌ರನ್ನು 5-0 ಅಂತರದಿಂದ ಮಣಿಸುವ ಮೂಲಕ ಪವಿತ್ರಾ ಭಾರತದ ಬಂಗಾರದ ಬೇಟೆ ಆರಂಭಿಸಿದರು.

ಶ್ಯಾಮ್ ಕುಮಾರ್ ಅವರು ಮಾರಿಯೊ ಬ್ಲಾಸಿಯಸ್ ಕಾಲಿ ಅವರನ್ನು 4-1 ರಿಂದ ಸೋಲಿಸಿ ಮೊದಲ ಸ್ಥಾನ ಪಡೆದರು. ಸಲ್ಮಾನ್ ಅನ್ವರ್ ಅವರು ಫಿಲಿಪಿನೊ ರೋಜನ್ ಲಾಡನ್‌ರನ್ನು 5-0 ಅಂತರದಿಂದ ಸೋಲಿಸಿದರೆ, ಮನೀಷ್ ಜಪಾನ್‌ನ ರೆಂಟಾರೊ ಕಿಮುರಾರನ್ನು ಸೋಲಿಸಿ ಚಿನ್ನ ಜಯಿಸಿದರು.

 ಏಕಪಕ್ಷೀಯವಾಗಿ ಸಾಗಿದ ಹೋರಾಟದಲ್ಲಿ ಸ್ಥಳೀಯ ಫೇವರಿಟ್ ಸುಗರ್ ರೇ ಒಕಾನಾರನ್ನು ಮಣಿಸಿದ ಆಶೀಷ್ ಚಿನ್ನದ ಪದಕ ಜಯಿಸಿದರು.

ಕಳೆದ ತಿಂಗಳು ಇಂಡಿಯಾ ಓಪನ್‌ನಲ್ಲಿ ಕಂಚು ಜಯಿಸಿದ್ದ ಶಶಿ ಚೋಪ್ರಾ(57ಕೆಜಿ) ಫೈನಲ್‌ನಲ್ಲಿ ಥಾಯ್ಲೆಂಡ್‌ನ ರಚದಾಪಾರ್ನ್ ಸಯೊಟೊ ವಿರುದ್ಧ 0-5 ರಿಂದ ಶರಣಾಗಿ ಬೆಳ್ಳಿಗೆ ತೃಪ್ತಿಪಟ್ಟರು.

ಮುಹಮ್ಮದ್ ಖಾನ್(56ಕೆಜಿ), ರಿತು ಗ್ರೆವಾಲ್(51ಕೆಜಿ), ಪವನ್ ಕುಮಾರ್(69ಕೆಜಿ) ಹಾಗೂ ಆಶೀಷ್ ಕುಮಾರ್(75ಕೆಜಿ) ಬುಧವಾರ ಸೆಮಿ ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News