ಟ್ರಾಕ್‌ಮನ್‌ಗಳ ರಕ್ಷಣೆಗಾಗಿ ಕ್ರಮ ಸ್ವಾಗತಾರ್ಹ

Update: 2018-02-15 18:30 GMT

ಮಾನ್ಯರೇ,

ಹಳಿಗಳ ಪರಿಶೀಲನೆ ವೇಳೆ ರೈಲುಗಳಿಗೆ ಸಿಲುಕಿ ಟ್ರಾಕ್‌ಮನ್‌ಗಳು ಸಾವನ್ನಪ್ಪುವುದನ್ನು ತಪ್ಪಿಸುವ ಸಲುವಾಗಿ ರೈಲ್ವೆ ಇಲಾಖೆಯು ಮುನ್ನೆಚ್ಚರಿಕೆಯ ಸಾಧನವನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ. ಟ್ರಾಕ್‌ಮನ್‌ಗಳ ಸುರಕ್ಷತೆಗೆ ಅಗತ್ಯ ಸಾಧನಗಳನ್ನು ನೀಡಬೇಕೆಂದು ರೈಲ್ವೆ ನೌಕರರ ಸಂಘವು ಬಹಳ ವರ್ಷಗಳಿಂದ ಒತ್ತಾಯಿಸುತ್ತಿತ್ತು. ಅದಕ್ಕೆ ಸಂಬಂಧಿಸಿದಂತೆ ಟ್ರಾಕ್‌ಮನ್‌ಗಳ ರಕ್ಷಣೆಗಾಗಿ ಈ ರಕ್ಷ್ಷಾ ಕವಚವನ್ನು ಜಾರಿಗೆ ತಂದಿದ್ದು, ಈ ಸಾಧನವು ಮೂಲತಃ ವಾಕಿ-ಟಾಕಿ ಸಾಧನವಾಗಿದೆ. ಇದು ರೈಲ್ವೆ ಸಿಗ್ನಲ್‌ಗಳನ್ನು ಆದರಿಸಿ ಕೆಲಸ ಮಾಡಲಿವೆ. ಅಂದರೆ ಹಳಿಗಳನ್ನು ಪರಿಶೀಲಿಸುತ್ತಿರುವಾಗ ಆ ಮಾರ್ಗದಲ್ಲಿ ರೈಲು ಬರುತ್ತಿದ್ದರೆ ಟ್ರಾಕ್‌ಮಾನ್‌ಗಳಿಗೆ ಈ ರಕ್ಷಕವು ಸೂಚನೆ ನೀಡಲಿದೆ. ಅಲ್ಲದೆ ಇದು ಮೂರು ಬಗೆಯಲ್ಲಿ ಸೂಚನೆ ನಿಡುತ್ತದೆ. ವಾಕಿ-ಟಾಕಿಯಲ್ಲಿನ ಎಲ್‌ಇಡಿ ದೀಪ ಬೆಳಗುತ್ತದೆ, ಸಾಧನದಿಂದ ಸೈರನ್ ಬರುತ್ತದೆ ಮತ್ತು ಸಾಧನವು ಜೋರಾಗಿ ನಡುಗಲಿದೆ. ಈ ರೀತಿಯ ಸೂಚನೆಗಳು ಬಂದಾಗ ಟ್ರಾಕ್‌ಮನ್‌ಗಳು ಹಳಿಯಿಂದ ದೂರ ಸರಿಯಬೇಕು. ರೈಲು ತೆರಳಿದ ಆನಂತರ ಪರೀಶಿಲನಾ ಕಾರ್ಯ ಮುಂದುವರಿಸಬೇಕು. ಇದನ್ನು ಹೆಚ್ಚಾಗಿ ಅಪಘಾತ ನಡೆಯುವಂತಹ ಸ್ಥಳದಲ್ಲಿ ಬಳಸಲಾಗುತ್ತದೆ.

ರೈಲ್ವೆ ಇಲಾಖೆಯು ಜಾರಿಗೆ ತಂದಿರುವ ಈ ನೂತನ ವ್ಯವಸ್ಥೆಯು ಟ್ರಾಕ್‌ಮನ್‌ಗಳ ಜೀವ ಉಳಿಸಲು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಅಪಾಯಕಾರಿಯಾಗಿರುವ ಎಲ್ಲಾ ಕಡೆಯಲ್ಲಿ ಬಳಸುವಂತಾಗಲು ಸರಕಾರವು ಮುಂದಾಗಲಿ.

ರಾಮು ಎಲ್.ಪಿ.

ಲಕ್ಕವಳ್ಳಿ

Writer - ರಾಮು ಎಲ್.ಪಿ.

contributor

Editor - ರಾಮು ಎಲ್.ಪಿ.

contributor

Similar News