ಪ್ರಬಲ ಭೂಕಂಪಕ್ಕೆ ಮೆಕ್ಸಿಕೊ ತತ್ತರ

Update: 2018-02-17 03:56 GMT

ಮೆಕ್ಸಿಕೊ ಸಿಟಿ, ಫೆ. 17: ನಗರದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಾಜಧಾನಿಯ ಭೂಕಂಪ ಅಲರಾಂ ವ್ಯವಸ್ಥೆ ಮತ್ತು ಕಟ್ಟಡಗಳು ಕೂಡಾ ಓಲಾಡಿ ಆತಂಕದ ವಾತಾವರಣ ಮೂಡಿಸಿವೆ.

ಮೆಕ್ಸಿಕೋದ ರಾಷ್ಟ್ರೀಯ ಭೂಕಂಪ ಸೇವೆಗಳ ವಿಭಾಗದ ಪ್ರಕಾರ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.0 ಇತ್ತು. ಗ್ಯುರೆರೊ, ಓಕ್ಸಾಕ ಮತ್ತು ಪ್ಯುಬ್ಲಾ ರಾಜ್ಯಗಳಲ್ಲೂ ಭೂಕಂಪ ಸಂಭವಿಸಿದೆ ಎಂದು ಭೂಕಂಪ ನಿಗಾ ಜಾಲವಾದ ಸ್ಕೈ ಅಲರ್ಟ್ ಹೇಳಿದೆ.

ಅಮೆರಿಕದ ಭೂವೈಜ್ಞಾನಿಕ ಸರ್ವೆ ಭೂಕಂಪದ ತೀವ್ರತೆಯನ್ನು 7.5 ಎಂದು ಪ್ರಕಟಿಸಿದೆ. ಆದರೆ ಬಳಿಕ ಅದನ್ನು ಪರಿಷ್ಕರಿಸಿ 7.2 ಎಂದು ಸ್ಪಷ್ಟಪಡಿಸಿದೆ. ಭೂಕಂಪದ ಕೇಂದ್ರ ಬಿಂದು ಒಕ್ಸಾಕಾ ರಾಜ್ಯದ ಪಿನೋತೆಪಾ ಡೆ ಡಾನ್ ಲೂಯಿಸ್ ನಗರದ ನೈರುತ್ಯಕ್ಕೆ 37 ಕಿಲೋಮೀಟರ್ ದೂರದಲ್ಲಿತ್ತು ಎಂದು ಅಂದಾಜಿಸಲಾಗಿದೆ.

ಕೇಂದ್ರ ಮತ್ತು ದಕ್ಷಿಣ ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿ ನೂರಾರು ಮಂದಿ ಮೃತಪಟ್ಟ ಘಟನೆಯ ಅರು ತಿಂಗಳ ಒಳಗಾಗಿ ಮತ್ತೆ ಭೀಕರ ಭೂಕಂಪ ಸಂಭವಿಸಿದೆ.

ಕಳೆದ ಸೆಪ್ಟೆಂಬರ್ 7ರಂದು 8.2 ತೀವ್ರತೆಯ ಭೂಕಂಪ ಸಂಭವಿಸಿ 96 ಮಂದಿ ಸಾವಿಗೀಡಾಗಿದ್ದರು. ಬಳಿಕ ಸೆಪ್ಟೆಂಬರ್ 19ರಂದು 7.1 ತೀವ್ರತೆಯ ಭೂಕಂಪ ಸಂಭವಿಸಿ 379 ಮಂದಿಯನ್ನು ಬಲಿ ಪಡೆದಿತ್ತು. ಈ ಬಾರಿಯ ಭೂಕಂಪದ ಸಾವು ನೋವಿನ ವಿವರಗಳು ಇನ್ನೂ ಲಭ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News